ಪರಿಚಯ

Last modified at 24/09/2016 11:50 by hfw

​​​​​​​ಪರಿಚಯ

ಪರಿಚಯ​

ಸಂವಿಧಾನದ ಅಡಿಯಲ್ಲಿ, ಆರೋಗ್ಯ ಎಂಬುದು ರಾಜ್ಯ ವಿಷಯವಾಗಿದ್ದು ಕರ್ನಾಟಕವು ತನ್ನದೇ ಆದ ಆರೋಗ್ಯ ರಕ್ಷಣೆ ವಿತರಣಾ ವ್ಯವಸ್ಥೆಯನ್ನು ಭಾರತ ಸರ್ಕಾರವು ಕಾಲಕಾಲಕ್ಕೆ ಒದಗಿಸಿರುವ ಮಾರ್ಗದರ್ಶಿಗಳ ಆಧಾರವಾಗಿ ಅಭಿವೃದ್ಧಿಪಡಿಸಿದೆ. ಬಹುಪಾಲು, ಆರೋಗ್ಯ ರಕ್ಷಣೆ ವಿತರಣಾ ವ್ಯಯಸ್ಥೆಯು ಕೇಂದ್ರ ಸರ್ಕಾರದ ಮಟ್ಟದಲ್ಲಿ ರಚಿಸಲಾಗಿರುವ ವಿವಿಧ ಸಮಿತಿಗಳ ಆಧಾರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಮುದಾಯಕ್ಕೆ ಸಮರ್ಪಕ ಆರೋಗ್ಯ ರಕ್ಷಣೆ ಕಲ್ಪಿಸಿ ಮನೆ ಮನೆ ಬಾಗಿಲಿಗೆ ಕೊಂಡೊಯ್ಯುವಲ್ಲಿ ಭೋರೆ ಸಮಿತಿ, ಮುದಲಿಯಾರ್ ಸಮಿತಿ ಮತ್ತಿತರ ಸಮಿತಿಗಳ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಹಿಂದಿನ ಪಂಚವಾರ್ಷಿಕ ಯೋಜನಾ ಅವಧಿಗಳಲ್ಲಿ ರಾಜ್ಯವಿಡಿ ವ್ಯಾಪಿಸಿದ ಪ್ರಾಥಮಿಕ ಆರೋಗ್ಯ ರಕ್ಷಣಾ ಮೂಲಸೌಕರ್ಯ ಸಂಸ್ಥೆಗಳ ಬೃಹತ್ ಜಾಲವೊಂದನ್ನು ಹುಟ್ಟುಹಾಕಲಾಗಿದೆ. ಮಲೇರಿಯಾ, ಫೈಲೇರಿಯಾ, ಕ್ಷಯ, ಕಾಲರಾ ಮುಂತಾದ ವಿಶಾಲ ವ್ಯಾಪ್ತಿಯ ಸಾಂಕ್ರಾಮಿಕ ರೋಗಗಳು ಹಾಗೂ ಅನೇಕ ಇತರ ಲಸಿಕೆಯಿಂದ ನಿವಾರಿಸಬಹುದಾದ ರೋಗಗಳಾದ ಕ್ಷಯ, ಡಿಫ್ತೀರಿಯಾ, ಪರ್ಟುಸಿಸ್, ಟೆಟಾನಸ್, ಪೋಲಿಯೋ, ಸಿಡುಬು ಹಾಗೂ ಹೆಪಾಟೈಟಿಸ್ ಬಿ & ಸಿ ಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿದ .ಡಿ.ಎಸ್.ಪಿ, ಎನ್.ಸಿ.ಡಿ ಅಪಾಯಕ ಅಂಶಗಳ ಸಮೀಕ್ಷೆಯಡಿಯಲ್ಲಿ ಪ್ರಾಮುಖ್ಯತೆ ನೀಡಿರುವುದು ಒಂದು ಬಹುಮುಖ್ಯ ಅಂಶವಾಗಿದೆ. ಅಯೋಡಿನ್ ಕೊರತೆಯ ತೊಂದರೆ, ಅಂಧತೆ, ಕ್ಯಾನ್ಸರ್, ಮಧುಮೇಹ ಮುಂತಾದ ಅನೇಕ ಮುಖ್ಯ ಸಾಂಕ್ರಾಮಿಕವಲ್ಲದ ರೋಗಗಳಿಗೂ ಅವಶ್ಯ ಪ್ರಾಮುಖ್ಯತೆ ನೀಡಲಾಗಿದೆ. ಇಲಾಖೆಯ ಅನೇಕ ಉಪಕ್ರಮಗಳ ಬಗ್ಗೆ ಕಾಲಕಾಲಕ್ಕೆ ತಿಳಿಸಲು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಾಧಿಸಿರುವ ಪ್ರಗತಿಯ ಪರಿವೀಕ್ಷಣೆಗಾಗಿ ರಾಜ್ಯ ಮಟ್ಟದಲ್ಲಿ, ವಿಭಾಗೀಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ಪ್ರಾಥಮಿಕ ಆರೋಗ್ಯ ಘಟಕದ ಮಟ್ಟದಲ್ಲೂ ಕಾಲಕ್ರಮವಾಗಿ ನಡೆಸುವ ಸಭೆಗಳು ರಾಜ್ಯದಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಸಫಲವಾಗಿ ಅನುಷ್ಠಾನ ಮಾಡಲು ಇಲಾಖೆಗೆ ಪ್ರೇರಕವಾಗಿದೆ. ರಾಷ್ಟ್ರೀಯ ಆರೋಗ್ಯ ನೀತಿಯನ್ನು ಪ್ರಮುಖ ಉದ್ದೇಶವಾಗಿರಿಸಿಕೊಂಡು ಭಾರತ ಸರ್ಕಾರದಿಂದ ಹೊರಡಿಸಲಾಗಿರುವ ನೀತಿ ನಿರ್ದೇಶಗಳ ಮಾದರಿಯಲ್ಲಿ 2000 ಇಸವಿಯ ಹೊತ್ತಿಗೆ ಎಲ್ಲರಿಗೂ ಆರೋಗ್ಯ ಎಂಬ ಗುರಿಯನ್ನು ತಲುಪಲು ಬೃಹತ್ ಉಪಕ್ರಮಗಳನ್ನು ಕೈಗೆತ್ತುಕೊಳ್ಳಲಾಯಿತು. ಎಂಡನೇ ಯೋಜನೆಯ ಅವಧಿಯಲ್ಲಿ ಹೈ-ರಿಸ್ಕ್ ಸೂಕ್ಷ್ಮದ ವೃಂದ, ಅಂದರೆ ತಾಯಿ, ಮಕ್ಕಳು ಹಾಗೂ ಹದಿಹರೆಯದ ಗುಂಪಿಗೆ ಅಂತೆಯೇ ಅವಕಾಶ ವಂಚಿತ ಭಾಗಗಳಾದ ಬುಡಕಟ್ಟು ಪ್ರದೇಶಗಳಲ್ಲಿನ ಜನಸಂಖ್ಯೆಯ ಮೇಲೂ ಗಮನ ಕೇಂದ್ರೀಕರಿಸುವ ಮೂಲಕವಾಗಿ ಇಡೀ ಜನಸಂಖ್ಯೆಯನ್ನು ತಲುಪಲು ಒತ್ತು ನೀಡಲಾಯಿತು. ಎಲ್ಲಾ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಸನ್ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಹಾಗೂ ಇಲಾಖೆಯ ಅವಶ್ಯಕತೆಗಳನ್ನು ಪೂರೈಸಲು ವೈದ್ಯಕೀಯ ಶಿಕ್ಷಣಕ್ಕಾಗಿ ಒಬ್ಬರು ಪ್ರತ್ಯೇಕ ಸಚಿವರನ್ನೂ ಸೃಜಿಸಿದೆ. ನಂತರದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ತಲುಪಿಸಲು, ಮುಂದೆ ತಿಳಿಸಿರುವ ಪ್ರತ್ಯೇಕ ಇಲಾಖೆಗಳನ್ನು ಸ್ಥಾಪಿಸಲಾಗಿದೆ

i.               ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ

ii.              ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

iii.            ಭಾರತೀಯ ಪದ್ಧತಿಯ ಔಷಧಿ ಮತ್ತು ಹೋಮಿಯೋಪತಿ ನಿರ್ದೇಶನಾಲಯ (ಆಯುಷ್)

iv.             ಔಷಧ ನಿಯಂತ್ರಣಾ ಇಲಾಖೆ ​

ಆರೋಗ್ಯ ಸಚಿವಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಅಂಗವಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಚಿವಾಲಯದ ಮತ್ತಿತರ ಅಧಿಕಾರಿಗಳು ಇಲಾಖೆಯ ವಿವಿಧ ಚಟುವಟಿಕೆಗಳನ್ನು ಉಸ್ತುವಾರಿ ಮಾಡುತ್ತಿದ್ದು, ಇಲಾಖೆಯ ಅವಶ್ಯಕತೆಗಳನ್ನೂ ಪೂರೈಸುತ್ತಿದ್ದಾರೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ

ಆರೋಗ್ಯ ಮಾನವಶಕ್ತಿ, ಪೂರ್ವಸಿದ್ಧತೆ, ಸಮಗ್ರೀಕೃತ ರೋಗಗಳ ಕಾವಲು ಯೋಜನೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಮಲೇರಿಯಾ, ಆರ್.ಸಿ.ಎಚ್, ಕ್ಷಯ ಮುಂತಾದ ವಿವಿಧ ವಿಭಾಗಗಳನ್ನು ಸ್ಥಾಪಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವನ್ನು ಕಾಲಕಾಲಕ್ಕೆ ಸಶಕ್ತಗೊಳ್ಳುತ್ತಿದೆ. ವೈದ್ಯಕೀಯ ಸಂಸ್ಥೆಗಳ ಅಭಿವೃದ್ಧಿ (ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆ), ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತಿತರ ಕಲ್ಯಾಣ ಯೋಜನೆಗಳಾದ ಮಾನಸಿಕ ಆರೋಗ್ಯ, ಶಾಲಾ ಆರೋಗ್ಯ ಮತ್ತು ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮಗಳೂ ಸಹ ಜಾರಿಗೊಂಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕೇಂದ್ರ ಕಛೇರಿಯು ರಾಜ್ಯದ ಕೇಂದ್ರಸ್ಥಾನದಲ್ಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರನ್ನು ಇಲಾಖೆಯ ಮುಖ್ಯಸ್ಥರಾಗಿ ಹೊಂದಿದ್ದು, ಅನೇಕ ಅಪರ ನಿರ್ದೇಶಕರುಗಳು, ಜಂಟಿ ಮತ್ತು ಉಪ ನಿರ್ದೇಶಕರುಗಳು ಇದಕ್ಕೆ ಸಹಾಯಕರಾಗಿ ಅನೇಕ ಕೇಂದ್ರ ಪ್ರಾಯೋಜಕತ್ವದ ಹಾಗೂ ರಾಜ್ಯ ಪ್ರಾಯೋಜಕತ್ವದ ಆರೋಗ್ಯ ಕಾರ್ಯಕ್ರಮಗಳ ಉಸ್ತುವಾರಿ ಮಾಡುವ ಸಲುವಾಗಿ ಸ್ಥಾಪಿತವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಸಂಸ್ಥೆ (ನ್ಯಾಕೋ)ಯ ಉಪಕ್ರಮಗಳನ್ನು ಜಾರಿಗೊಳಿಸಿ ಉಸ್ತುವಾರಿ ಮಾಡಲು ಪ್ರತ್ಯೇಕ ಯೋಜನಾ ನಿರ್ದೇಶಕರೊಬ್ಬರು ಇರುತ್ತಾರೆ. ಆರೋಗ್ಯ ಮತ್ತು ಪೂರ್ವಯೋಜನೆಗಳು, ಸಾರ್ವಜನಿಕ ಆರೋಗ್ಯ ಸಂಸ್ಥೆ, ಸಾಂಕ್ರಾಮಿಕ ರೋಗಗಳು, ಆರೋಗ್ಯ ಶಿಕ್ಷಣ ಮತ್ತು ತರಬೇತಿ, ಐಇಸಿ, ಆರ್ ಸಿಎಚ್, ನೇತ್ರಶಾಸ್ತ್ರ, ಕ್ಷಯ, ಕುಷ್ಠರೋಗ, ಮಲೇರಿಯಾ ಮತ್ತು ಫೈಲೇರಿಯಾ ಈ ವಿಭಾಗಗಳಿಗೆ ಪ್ರತ್ಯೇಕ ಜಂಟಿ ನಿರ್ದೇಶಕರುಗಳಿದ್ದು, ಜಂಟಿ ನಿರ್ದೇಶಕರು (ವೈದ್ಯಕೀಯ) ಇವರೂ ಇರುತ್ತಾರೆ. ಈ ಜಂಟಿ ನಿರ್ದೇಶಕರುಗಳಿಗೆ ಆಯಾ ಉಪನಿರ್ದೇಶಕರುಗಳು ಸಹಾಯಕವಾಗಿರುತ್ತಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಂಸ್ಥೆ (ಎಸ್ ಐಎಚ್ಎಫ್ ಡಬ್ಲ್ಯೂ)

ಇಲಾಖೆಯ ತರಬೇತಿ ಚಟುವಟಿಕೆಗಳನ್ನು ಆಧುನಿಕಗೊಳಿಸಲು ಒಂದು ಪ್ರತ್ಯೇಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಂಸ್ಥೆಯನ್ನು ಐಪಿಪಿ(IX) (K) ಅಡಿಯಲ್ಲಿ ಸೃಜಿಸಲಾಗಿದೆ. ಈ ಸಂಸ್ಥೆಗೆ ನಿರ್ದೇಶಕರೊಬ್ಬರು, ಜಂಟಿ ನಿರ್ದೇಶಕರೊಬ್ಬರು ಹಾಗೂ 10 ಉಪನಿರ್ದೇಶಕರುಗಳು ಇರುತ್ತಾರೆ. ಇಲಾಖೆಯ ವಿವಿಧ ಪ್ರವೃತ್ತಿಯವರಿಗೆ ತರಬೇತಿ ಚಟುವಟಿಕೆಗಳನ್ನು ವಿನ್ಯಾಸಗೊಳಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಸೇರ್ಪಡೆ ತರಬೇತಿ, ಸೇವಾವಧಿಯಲ್ಲಿನ ತರಬೇತಿ, ತರಬೇತಿಗಾಗಿ ಹೊರ ನಿಯೋಜನೆಗಳು ಹಾಗೂ ಕೌಶಲ್ಯಾಧಾರಿತ ತರಬೇತಿಗಳನ್ನು ಈ ಸಂಸ್ಥೆಯು ಯೋಜಿಸುತ್ತದೆ. ತರಬೇತಿ ಮಾಡ್ಯೂಲುಗಳನ್ನು ತಯಾರಿಸುವುದು, ತರಬೇತಿ ವೇಳಾಪಟ್ಟಿಗಳು ಹಾಗೂ ತರಬೇತಿಪೂರ್ವ, ತರಬೇತಿ ನಂತರ ಮೌಲ್ಯಮಾಪನಗಳನ್ನೂ ಸಹ ಈ ಸಂಸ್ಥೆಯು ನಿರ್ವಹಿಸುತ್ತದೆ. ಇಲಾಖೆಯ ದೈನಂದಿನ ಚಟುವಟಿಕೆಗಳಿಗೆ ಉಪಯುಕ್ತವಾಗುವ ಸ್ನಾತಕೋತ್ತರ ತರಬೇತಿ ಮತ್ತು ಪದವಿ ಹಾಗೂ ಡಿಪ್ಲೋಮಾ ತರಗತಿಗಳನ್ನು ನೀಡಲು ಈ ಸಂಸ್ಥೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸುವ ಪ್ರಸ್ತಾವನೆಯಿದೆ. ಈ ಸಂಸ್ಥೆಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿಸಲು ಮಾತುಕತೆ ನಡೆಯುತ್ತಿದ್ದು, ಪ್ರಸ್ತುತದ ಶಿಕ್ಷಣ ಮೂಲಸೌಕರ್ಯವನ್ನು ಇದಕ್ಕೆ ತಕ್ಕಂತೆ ಉನ್ನತೀಕರಿಸಲಾಗುವುದು. ಮಲೇರಿಯಾ, ಫೈಲೇರಿಯಾ, ಜೆಇ ಮತ್ತು ಚಿಕನ್ಗುನ್ಯಾಗಳೇ ಮುಂತಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಜಿಲ್ಲಾಮಟ್ಟದಲ್ಲಿ ನಿಯಂತ್ರಣಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಉಸ್ತುವಾರಿ ಮಾಡಲು ಆಯಾ ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಗುಲ್ಬರ್ಗಾಗಳಲ್ಲಿ ಇಲಾಖೆಯು ನಾಲ್ಕು ವಿಭಾಗೀಯ ಉಪನಿರ್ದೇಶಕರುಗಳನ್ನು ಹೊಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಸರ್ಜನ್ನುಗಳು ಜಿಲ್ಲೆಗಳ ಆರೋಗ್ಯ ಮತ್ತು ಕ್ಲಿನಿಕಲ್ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಾರೆ. ಜಿಲ್ಲಾ ಸರ್ಜನ್ ಮುಖ್ಯಸ್ಥರಾಗಿರುವ ಜಿಲ್ಲಾ ಆಸ್ಪತ್ರೆ/ಸಾರ್ವಜನಿಕ ಆಸ್ಪತ್ರೆಯ ಹೊರತಾಗಿ ಜಿಲ್ಲೆಯ ಎಲ್ಲಾ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯು ಒಟ್ಟಾರೆ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ವ್ಯವಸ್ಥೆಯ ವ್ಯಾಪ್ತಿಯೊಳಗೇ ಆಡಳಿತಾತ್ಮಕವಾಗಿ ಬರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಜಿಲ್ಲಾ ಪಂಚಾಯಿತಿಯೊಂದಿಗೆ ಸೇರಿಸಲಾಗುತ್ತದೆ. ಅವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಮತ್ತಿತರ ಆರೋಗ್ಯ ರಕ್ಷಣಾ ಮತ್ತು ಪ್ರೋತ್ಸಾಹಕ ಚಟುವಟಿಕೆಗಳನ್ನು ಜಾರಿಗೊಳಿಸಲು ಜವಾಬ್ದಾರರಾಗಿರುತ್ತಾರೆ. 100 ಅಥವಾ ಹೆಚ್ಚು ಹಾಸಿಗೆ ಸಂಖ್ಯೆಯಿರುವ ಜಿಲ್ಲಾ ಕೇಂದ್ರಸ್ಥಾನದ ಆಸ್ಪತ್ರೆ ಮತ್ತು ಇತರ ಆಸ್ಪತ್ರೆಗಳ ಹೊರತಾಗಿ ಅವರು ಜಿಲ್ಲೆಯಲ್ಲಿನ ಎಲ್ಲಾ ವೈದ್ಯಕೀಯ/ಆರೋಗ್ಯ ಸಂಸ್ಥೆಗಳ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಈ ಕಾಲೇಜುಗಳಿಗೆ ಹೊಂದಿಸಿರುವ ವೈದ್ಯಕೀಯ ಕಾಲೇಜುಗಳನ್ನು ಹಾಗೂ ವೈದ್ಯಕೀಯ ಸಂಸ್ಥೆಗಳನ್ನುಪ್ರತ್ಯೇಕವಾಗಿ ತಾವುಗಳೇ ಉಸ್ತುವಾರಿ ಮಾಡಿಕೊಳ್ಳುವಂತಿದ್ದು, ಜೊತೆಗೆ ವೈದ್ಯಕೀಯ ಶಿಕ್ಷಣದ ನಿರ್ದೇಶಕರು ಸಹ ಮೇಲುಸ್ತುವಾರಿ ಮಾಡುತ್ತಾರೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪಥಿ (ಆಯುಶ್) ಸಂಸ್ಥೆಗಳನ್ನು ಪ್ರತ್ಯೇಕವಾಗಿ ಉಸ್ತುವಾರಿ ಮಾಡಲಾಗುತ್ತಿದ್ದು, ಅದನ್ನು ಭಾರತೀಯ ಪದ್ಧತಿಯ ಔಷಧಿ ಮತ್ತು ಹೋಮಿಯೋಪಥಿ ಸಂಸ್ಥೆಯ ನಿರ್ದೇಶಕರು ತಮ್ಮ ಉಪನಿರ್ದೇಶಕರುಗಳ ಮೂಲಕ ಉಸ್ತುವಾರಿ ಮಾಡುತ್ತಾರೆ. ಜಿಲ್ಲಾ ಕಾವಲು ಅಧಿಕಾರಿಗಳು ಜಿಲ್ಲಾ ಆರೋಗ್ಯ ಪ್ರಯೋಗಾಲಯಗಳ ಚಟುವಟಿಕೆಗಳನ್ನು ಉಸ್ತುವಾರಿ ಮಾಡುತ್ತಿದ್ದು, ಎಲ್ಲಾ ಆಡಳಿತಾತ್ಮಕ ವಿಚಾರಗಳಿಗೂ ಅವರು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳುತ್ತಾರೆ. ಯೋಜನಾ ನಿರ್ದೇಶಕರು(ಐಡಿಎಸ್ ಪಿ) ಇವರಿಂದ ಹೊರಡಿಸಿರುವ ತಾಂತ್ರಿಕ ಮಾರ್ಗದರ್ಶಿಗಳನ್ನು ಜಾರಿಗೊಳಿಸಲು ಅವರು ಕರ್ತವ್ಯಬದ್ಧರಾಗಿರುತ್ತಾರೆ.

ಮಲೇರಿಯಾ, ಆರ್.ಸಿ.ಎಚ್. ಕುಷ್ಠ, ಕ್ಷಯ ಮತ್ತು ಮಾನಸಿಕ ಆರೋಗ್ಯಗಳಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳಿಗೆ ಮುಂದುವರೆದು ಆಯಾ ಕಾರ್ಯಕ್ರಮ ಅಧಿಕಾರಿಗಳು ಸಹಾಯಕರಾಗಿರುತ್ತಾರೆ. ಪ್ರತಿಯೊಂದು ಕಂದಾಯ ತಾಲ್ಲೂಕಿನಲ್ಲೂ ತಾಲ್ಲೂಕು ಆರೋಗ್ಯ ಅಧಿಕಾರಿಗಳಿದ್ದು, ಅವರು ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಆಡಳಿತಾತ್ಮಕವಾಗಿ ಹೊಣೆಗಾರರಾಗಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿ.ಎಚ್.ಸಿಗಳ) ಮತ್ತು ಪ್ರಾಥಮಿಕ ಆರೋಗ್ಯ ಘಟಕಗಳ (ಪಿ.ಎಚ್.ಯು) ವೈದ್ಯಕೀಯ ಅಧಿಕಾರಿಗಳು ಅವರ ಸಹಾಯಕರಾಗಿರುತ್ತಾರೆ. ಬೆಂಗಳೂರು ಮತ್ತು ಮೈಸೂರು ಹೊರತಾಗಿ ಮಿಕ್ಕ ಜಿಲ್ಲೆಯ ಕೇಂದ್ರಸ್ಥಾನದಲ್ಲಿ, ಕೇವಲ ಚಿಕಿತ್ಸೆಯ ಉದ್ದೇಶಗಳಿಗಾಗಿಯೇ ಜಿಲ್ಲಾ ಪ್ರಮುಖ ಆಸ್ಪತ್ರೆಗಳಿರುತ್ತವೆ. ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯೂ ಜಿಲ್ಲಾ ಸರ್ಜನ್ನಿನ ನೇತೃತ್ವದಲ್ಲಿದ್ದು, ವಿವಿಧ ವಿಶೇಷತಜ್ಞತೆಯುಳ್ಳ ಇತರ ಸ್ಪೆಷಲಿಸ್ಟ್ ಗಳೂ ಇರುತ್ತಾರೆ. ಪ್ರತೀ ನಾಲ್ಕು ಪಿ.ಎಚ್.ಸಿಗಳಿಗೆ ಒಂದರಂತೆ ಉನ್ನತೀಕರಿಸಿ, ಪ್ರತಿಯೊಂದಕ್ಕೂ 1.2 ಲಕ್ಷ ಜನಸಂಖ್ಯೆಯನ್ನು ನೋಡಿಕೊಳ್ಳುವ ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿ.ಎಚ್.ಸಿಗಳು) ಸ್ಥಾಪಿಸಲಾಗಿದೆ. ಇಂತಹ ಪ್ರತೀ ಸಿ.ಎಚ್.ಸಿಗಳು 30 ಹಾಸಿಗೆಗಳನ್ನು ಹೊಂದಿದ್ದು ಮೂರು ಸ್ಪೆಷಾಲಿಟಿಗಳಾದ ಔಷಧ, ಶಸ್ತ್ರಚಿಕಿತ್ಸೆ ಮತ್ತು ಗರ್ಭಕೋಶಶಾಸ್ತ್ರ ಇರುತ್ತದೆ, ಜೊತೆಗೆ ಇದೀಗ ಸಿ.ಎಚ್.ಸಿಗಳಲ್ಲಿ ದಂತಕೀಯ ಬೋಧನಾ ವಿಭಾಗವೂ ಒಂದು ಹೆಚ್ಚುವರಿ ಸ್ಪೆಷಾಲಿಟಿಯಾಗಿರುತ್ತದೆ. ಉಪವಿಭಾಗೀಯ ಮಟ್ಟದಲ್ಲಿ, ಐದು ಸ್ಪೆಷಾಲಿಟಿಗಳಾದ ಔಷಧ, ಶಸ್ತ್ರಚಿಕಿತ್ಸೆ, ಮಕ್ಕಳತಜ್ಞತೆ, ಗರ್ಭಕೋಶಶಾಸ್ತ್ರ ಹಾಗೂ ದಂತಕೀಯ ಶಸ್ತ್ರಚಿಕಿತ್ಸೆಗಳನ್ನುಳ್ಳ 50 ಹಾಸಿಗೆಗಳ ಸಿ.ಎಚ್.ಸಿಗಳು ಇವೆ. ಇಲ್ಲಿನ ಕೆಲವು ಸಿ.ಎಚ್.ಸಿಗಳನ್ನು 100 ಹಾಸಿಗೆ ಆಸ್ಪತ್ರೆಗಳಾಗಿ ಹೆಚ್ಚಿನ ಉನ್ನತೀಕರಣ ಮಾಡಲಾಗಿದೆ. ಕರ್ನಾಟಕ ಸರ್ಕಾರವು ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು/ಸಿ.ಎಚ್.ಸಿಗಳನ್ನು ನೂರು ಹಾಸಿಗೆಗಳಿಗೆ ಉನ್ನತೀಕರಿಸಲು ಚಿಂತನೆ ನಡೆಸುತ್ತಿದೆ. ಮೈದಾನಭೂಪ್ರದೇಶದಲ್ಲಿ 30,000 ಜನಸಂಖ್ಯೆಗೆ ಓಗೊಡುವ ಮತ್ತು ಬೆಟ್ಟಗಾಡು, ಬುಡಕಟ್ಟು ಪ್ರದೇಶಗಳಲ್ಲಿ 20,000 ಜನರಿಗೆ ಕಾಳಜಿ ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳನ್ನು ಪಿ.ಎಚ್.ಸಿಗಳಿಗಿಂತ ಉನ್ನತೀಕರಿಸಿ ಪ್ರಾಥಮಿಕ ಹಾಗೂ ಚಿಕಿತ್ಸಾತ್ಮಕ ಸೇವೆಗಳನ್ನು ನೀಡಲು ಸನ್ನದ್ಧಗೊಳಿಸಲಾಗಿದೆ. ಇವುಗಳು ಸುತ್ತಮುತ್ತಲಿನ ಪಿ.ಎಚ್.ಸಿಗಳಿಗೆ ಮೊದಲ ರೆಫರಲ್ ಘಟಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಪಿ.ಎಚ್.ಸಿಗಳನ್ನು ಸಬಲಗೊಳಿಸುವ ಮೂಲಕ, ಈ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆ ವಿತರಣೆಯ ಒಂದು ಉಪಕ್ರಮವಾಗಿ ಭಾರತ ಸರ್ಕಾರದ ಮಾದರಿಯಲ್ಲಿ ಅಳವಡಿಸಿಕೊಂಡಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಯಾ ಪ್ರದೇಶಗಳಲ್ಲಿ ಉಪಕೇಂದ್ರಗಳ ಜಾಲದ ಮೂಲಕ ಹಾಗೂ ಇತರ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಮೂಲಕ  ಪ್ರಾಥಮಿಕ ಆರೋಗ್ಯ ರಕ್ಷಣೆ ಒದಗಿಸುತ್ತವೆ. ಪ್ರಾಥಮಿಕ ಆರೋಗ್ಯ ರಕ್ಷಣೆಯು ನಿವಾರಣಾ ಸೇವೆಗಳು, ಚಿಕಿತ್ಸಾತ್ಮಕ ಸೇವೆಗಳು, ನಿಸರ್ಗದ ನೈರ್ಮಲ್ಯ ವ್ಯವಸ್ಥೆ, ಆರೋಗ್ಯ ಶಿಕ್ಷಣ, ಕುಟುಂಬ ಕಲ್ಯಾಣ ಸೇವೆಗಳೇ ಮುಂತಾದವುಗಳನ್ನು ಹೊಂದಿದ್ದು, ಕಾಲಕಾಲಕ್ಕೆ ಜಾರಿಯಲ್ಲಿರುವ ಅನೇಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಆರೋಗ್ಯ ಕುರಿತಾದ ಅಂಕಿಅಂಶಗಳನ್ನು ದಾಖಲಿಸುತ್ತಾ ಬಂದಿದ್ದು, ಪಿ.ಎಸ್.ಸಿಗಳ ಜಾಲವೊಂದರ ಮೂಲಕವೂ ಇವುಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ತಿಳಿಸಿರುವಂತೆ, ಪ್ರತೀ ನಾಲ್ಕು ಪಿ.ಎಚ್.ಸಿಗಳಲ್ಲಿ ಒಂದನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಲಾಗಿದ್ದು, ನಿವಾರಣಾತ್ಮಕ ಸೇವೆಗಳ ಜೊತೆಜೊತೆಗೆ ಚಿಕಿತ್ಸಾತ್ಮಕ ಸೇವೆಗಳೂ ಇವೆ. ಈ ಮೇಲಿನ ಸಂಸ್ಥೆಗಳ ಜೊತೆಗೆ, ರಾಜ್ಯದಲ್ಲಿ ಜನರಲ್ ಆಸ್ಪತ್ರೆಗಳು ಮತ್ತು ಸಿವಿಲ್ ಆಸ್ಪತ್ರೆಗಳೂ ಇವೆ. ಈ ಆಸ್ಪತ್ರೆಗಳು ಪುನರ್ನಿರ್ಮಾಣ ಕಾರ್ಯಕ್ರಮಗಳಿಗೂ ಮುಂಚೆಯೇ ಇದ್ದಂತಹವು. ಈ ಸಂಸ್ಥೆಗಳ ನಾಮಕರಣವನ್ನು ತರ್ಕಬದ್ಧಗೊಳಿಸಲು ಸರ್ಕಾರವು ಪರಿಗಣಿಸುತ್ತಿದೆ. ಗ್ರಾಮೀಣ ಜನತೆಗಾಗಿ ಸ್ಥಾಪಿಸಿರುವ ಈ ಉಪಕೇಂದ್ರಗಳನ್ನು ಮೈದಾನ ಪ್ರದೇಶ ಮತ್ತು ಹೊಸ ಪ್ರದೇಶಗಳಲ್ಲಿ ಐದು ಸಾವಿರ ಜನಸಂಖ್ಯೆಗಾಗಿ ಮತ್ತು ಗುಡ್ಡಗಾಡು, ಬುಡಕಟ್ಟು, ಹೊಕ್ಕಲು ದುಸ್ತರವಾದ ದೂರದ ಪ್ರದೇಶಗಳಲ್ಲಿ ಮೂರು ಸಾವಿರ ಜನರಿಗಾಗಿ ಸ್ಥಾಪಿಸಲಾಗಿದೆ. ಪ್ರತಿಯೊಂದು ಉಪಕೇಂದ್ರವೂ ಒಬ್ಬರು ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ನಿಂದ (ಮಹಿಳೆ) ಹಾಗೂ ಜೊತೆಗಿರುವ ಒಬ್ಬರು ಜೂನಿಯರ್ ಹೆಲ್ತ್ ಅಸಿಸ್ಟೆಂಟ್ (ಪುರುಷರು) ರಿಂದ ಕೂಡಿದ್ದು, ಅವರುಗಳು ತಮಗೆ ನಿಗದಿಸಿರುವ ವಲಯವನ್ನು ನಿರ್ವಹಿಸುತ್ತಾರೆ. ಸಾರ್ವಜನಿಕ ಆರೋಗ್ಯ ಅರ್ಹತೆ ಎಂಬುದನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಹುದ್ದೆಗಳನ್ನು ನಿರ್ವಹಿಸಲು ಹಾಗೂ ಚಿಕಿತ್ಸಾತ್ಮಕ ಅಂಶಗಳನ್ನು ಸಾಂಸ್ಥಿಕಗೊಳಿಸಿಲ್ಲವಾದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೂ ಕಾರ್ಯಕ್ರಮ ಅಧಿಕಾರಿಗಳನ್ನು ಪ್ರಸ್ತಾವಿಸಲಾಗಿದೆ.  ಹೀಗೆ ಪ್ರಸ್ತಾವಿಸಿರುವ ಸಾರ್ವಜನಿಕ ಆರೋಗ್ಯ ಅರ್ಹತೆಯು ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಡಿಪ್ಲೋಮಾ ಅಥವಾ ಪದವಿಯಾಗಿ ನಿಗದಿಸಿರುತ್ತದೆ. ಇದೀಗ ಸಾರ್ವಜನಿಕ ಆರೋಗ್ಯದಲ್ಲೂ, ಇನ್ನೂ ಹೆಚ್ಚಿನ ಸ್ಪೆಷಲೈಸೇಷನ್ ಸಾಮಾನ್ಯ, ಅತಿಸಾಮಾನ್ಯವಾಗಿದೆ. ಉಪ ಸ್ಪೆಷಾಲಿಟಿಗಳಲ್ಲೂ ಸಹ ಅನೇಕ ಸಾರ್ವಜನಿಕ ಆರೋಗ್ಯ ಅರ್ಹತೆಗಳು ಮೂಡಿ ಬರುತ್ತಿವೆ. ಅಂತಹ ಕೆಲವನ್ನು ಈ ಕೆಳಗೆ ನೀಡಲಾಗಿದೆ:

(ಡಿಪ್ಲೋಮಾ ಇನ್ ಇಂಡಸ್ಟ್ರಿಯಲ್ ಹೈಜೀನ್ (ಡಿಐಎಚ್), ಡಿಪ್ಲೋಮಾ ಇನ್ ಮ್ಯಾಟರ್ನಿಟಿ ಆ್ಯಂಡ್ ಚೈಲ್ಡ್ ವೆಲ್ಫೇರ್ (ಡಿಎಂಸಿಡಬ್ಲ್ಯೂ), ಡಿಪ್ಲೋಮಾ ಇನ್ ಟ್ರಾಪಿಕಲ್ ಮೆಡಿಸಿನ್ ಆ್ಯಂಡ್ ಹೆಲ್ತ್ (ಡಿಟಿಎಂ&ಎಚ್), ಡಿಪ್ಲೋಮಾ ಇನ್ ಎಪಿಡೆಮಾಲಜಿ (ಡಿಇ), ಡಿಪ್ಲೋಮಾ ಇನ್ ಪಬ್ಲಿಕ್ ಹೆಲ್ತ್ ಅಡ್ಮಿನಿಸ್ಟ್ರೇಷನ್ (ಡಿಪಿಎಚ್ಎ), ಡಿಪ್ಲೋಮಾ ಇನ್ ಟ್ಯೂಬರ್ಕ್ಯೂಲಾಸಿಸ್ ಆ್ಯಂಡ್ ಚೆಸ್ಟ್ ಡಿಸೀಸಸ್ (ಡಿಟಿ&ಸಿಡಿ) ಮತ್ತಿತರ ಹಲವು.​​


Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

ವಿನ್ಯಾಸ,ನಿರ್ವಹಣೆ ಮತ್ತು ಅಭಿವೃದ್ಧಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಕರ್ನಾಟಕ ಸರ್ಕಾರ
© 2020, All Rights Reserved.