ಪರಿಚಯ
ರೇಷ್ಮೆ ಕೃಷಿ ಮತ್ತು ಕೈಗಾರಿಕೆಯ ವಿವಿಧ ಸರ್ವಾಂಗೀಣ ಚಟುವಟಿಕೆಗಳ ಅಭಿವೃದ್ಧಿ ಇಲಾಖೆಯ ಪ್ರಮುಖ ಕರ್ತವ್ಯ. ಹಿಪ್ಪುನೇರಳೆ ವ್ಯವಸಾಯ, ರೇಷ್ಮೆ ಮೊಟ್ಟೆ ಉತ್ಪಾದನೆ ನಿರ್ವಹಣೆ, ಚಾಕಿ ಸಾಕಾಣಿಕೆ, ರೇಷ್ಮೆ ಹುಳು ಸಾಕಾಣಿಕೆ, ರೋಗ ನಿಯಂತ್ರಣ, ರೇಷ್ಮೆ ಗೂಡಿನ ಉತ್ಪಾದನೆ, ವಿಂಗಡಣೆ, ವಿಲೇವಾರಿ, ಕಚ್ಛಾ ರೇಷ್ಮೆ ಉತ್ಪಾದನೆ, ಪರಿಷ್ಕರಣ ಮತ್ತು ಪರೀಕ್ಷೆ ಈ ಎಲ್ಲಾ ಚಟುವಟಿಕೆಗಳ ಬಗ್ಗೆ ಉದ್ಯಮದಲ್ಲಿ ತೊಡಗಿರುವವರಿಗೆ ತಾಂತ್ರಿಕ ಮಾಹಿತಿ ಒದಗಿಸುವುದು ಹಾಗೂ ರೇಷ್ಮೆ ಚಟುವಟಿಕೆಯ ನೀತಿ ನಿಯಮಗಳನ್ನು ರೂಪಿಸಿ ಇವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಇಲಾಖೆಯ ಕಾರ್ಯವ್ಯಾಪ್ತಿ. ರೈತರಿಗೆ ರೋಗ ರಹಿತ ರೇಷ್ಮೆ ಮೊಟ್ಟೆ ಪೂರೈಕೆ, ಬಿತ್ತನೆ ಕಡ್ಡಿ ಪೂರೈಕೆ - ಈ ಎಲ್ಲಾ ಚಟುವಟಿಕೆಗಳ ಸಂಪೂರ್ಣ ನಿರ್ವಹಣೆ, ಮೇಲ್ವಿಚಾರಣೆ, ಇಲಾಖೆಯ ಕಾರ್ಯ ವ್ಯಾಪ್ತಿಗೆ ಬರುತ್ತದೆ.
ಇಲಾಖೆಯ ಹಿರಿಯ ಐ.ಎ.ಎಸ್ ಅಧಿಕಾರಿಯವರ ನೇತೃತ್ವವನ್ನು ಹೊಂದಿದೆ. ನಿರ್ದೇಶನಾಲಯದಲ್ಲಿ ತಾಂತ್ರಿಕ ವಿಷಯಗಳ ನಿರ್ವಹಣೆಗಾಗಿ ರೇಷ್ಮೆ ಹೆಚ್ಚುವರಿ ನಿರ್ದೇಶಕರು, ಆಡಳಿತ ವಿಷಯಗಳ ನಿರ್ವಹಣೆಗೆ ಹೆಚ್ಚುವರಿ ನಿರ್ದೇಶಕರು, (ಕೆ.ಎ.ಎಸ್ ಹಿರಿಯ ಶ್ರೇಣಿ ಅಧಿಕಾರಿ), ಲೆಕ್ಕಪತ್ರ ನಿರ್ವಹಣೆಗೆ ಮುಖ್ಯ ಲೆಕ್ಕಾಧಿಕಾರಿಗಳು, ಮುಖ್ಯ ಅರ್ಥಶಾಸ್ತ್ರಜ್ಞರು ಹಾಗೂ ಸಹಾಕಾರ ಸಂಘಗಳ ಜಂಟಿ ನಿಬಂಧಕರು ಗಳನ್ನೊಳಗೊಂಡ ಪ್ರತ್ಯೇಕ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.
ವಿಭಾಗೀಯ ಮಟ್ಟದಲ್ಲಿ ಜಂಟಿ ನಿರ್ದೇಶಕರುಗಳು, ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು, ಉಪ ವಿಭಾಗೀಯ ಮಟ್ಟದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕರುಗಳು ಹಾಗೂ ಕ್ಷೇತ್ರ ಮಟ್ಟದಲ್ಲಿ ವಿಸ್ತರಣಾಧಿಕಾರಿಗಳನ್ನೊಳಗೊಂಡ ತಾಂತ್ರಿಕ ಅಧಿಕಾರಿಗಳ ತಂಡ ರಾಜ್ಯಾದ್ಯಂತ ತಾಂತ್ರಿಕ ಮಾಹಿತಿ ವರ್ಗಾವಣೆಯಲ್ಲಿ ಕಾರ್ಯನಿರತವಾಗಿವೆ.