ಅಪರ ಪೊಲೀಸ್ ಮಹಾ
ನಿರ್ದೇಶಕರ ಸಂದೇಶ
ನಲ್ಮೆಯ
ನಾಗರೀಕ ಬಂಧುಗಳೇ,
ಭ್ರಷ್ಟಾಚಾರವು, ನಮ್ಮ ರಾಷ್ಟ್ರದ
ಆರ್ಥಿಕತೆಯನ್ನು ವಿಪರೀತವಾಗಿ ಧಕ್ಕೆಗೀಡುಮಾಡುತ್ತಿರುವ ಅಂಶಗಳಲ್ಲೊಂದಾಗಿದೆ. ಭ್ರಷ್ಟಾಚಾರವು ಆರ್ಥಿಕ
ಬೆಳವಣಿಗೆಗೆ ಮಾರಕವಾಗಿದೆ ಹಾಗೂ ಘಾಸಿಯುಂಟುಮಾಡುತ್ತದೆ. ಭ್ರಷ್ಟಾಚಾರವು, ಯಾವುದೇ ಎರಡು ಬಣಗಳು ತಂತ್ರಗಾರಿಕೆ
ಹೂಡಿ, ಹೊಂದಾಣಿಕೆ, ಸಹಕಾರ ಮಾಡಿಕೊಂಡು ವ್ಯವಹಾರಕ್ಕೆ ತೊಡಗಲು ಬಯಸಿ ಹೂಡುವ ತಂತ್ರಗಾರಿಕೆಯ ಮೊತ್ತವಾಗಿರುತ್ತದೆ.
ಭ್ರಷ್ಟಾಚಾರ ಎಂಬುದು ಜವಾಬ್ದಾರಿ ವಹಿಸಿರುವ ನಿಧಿಗಳನ್ನು ಹಾಗೂ ಅಧಿಕಾರವನ್ನು ವೈಯಕ್ತಿಕ/ಖಾಸಗಿ
ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವ ಅರ್ಥದ ಒಂದು ವಿಶಾಲ ಪದವಷ್ಟೆ:- ಕಳ್ಳತನ, ದ್ರೋಹ, ಸ್ವಜನಪಕ್ಷಪಾತ,
ಅಧಿಕಾರದ ದುರುಪಯೋಗ, ಇತ್ಯಾದಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಛೇರಿಗಳು ಹಾಗೂ ಸಂಸ್ಥೆಗಳನ್ನು
ಖಾಸಗಿ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಾಗ ಅವು ತಮ್ಮ ನೈತಿಕತೆಯನ್ನು ಕಳೆದುಕೊಳ್ಳುತ್ತವೆ. ಸ್ಥಾಪಿತ
ಪ್ರಜಾಪ್ರಭುತ್ವಗಳಿಗೆ ಇದು ಮಾರಕವಾಗಿದೆ. ಆರ್ಥಿಕವಾಗಿ, ಭ್ರಷ್ಟಾಚಾರವು ರಾಷ್ಟ್ರೀಯ ಸಂಪತ್ತನ್ನು
ದೋಚುತ್ತದೆ. ಭ್ರಷ್ಟಾಚಾರವು ಸಮಾಜದಲ್ಲಿನ ಸಾಮಾಜಿಕ ಹಂದರವನ್ನು ಹಾಳುಮಾಡುತ್ತದೆ. ಜನತೆಯು ವ್ಯವಸ್ಥೆಯಲ್ಲಿಟ್ಟಿರುವ
ನಂಬಿಕೆಯನ್ನು ಅದು ಕೀಳು ಮಾಡುತ್ತದೆ.
ಆಡಳಿತದಲ್ಲಿ ಭ್ರಷ್ಟಾಚಾರದ ಉಪಟಳವನ್ನು
ಪ್ರಭಾವಕಾರಿಯಾಗಿ ಹತ್ತಿಕ್ಕುವ ಸಲುವಾಗಿ, ಕೇಂದ್ರ ತನಿಖಾ ದಳದ ಮಾದರಿಯಲ್ಲಿ ಕರ್ನಾಟಕ ಸರ್ಕಾರವು
ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿದೆ.
ಈ ವಿಪತ್ತನ್ನು ಹತ್ತಿಕ್ಕಲು ನಾವು
ಸಾರ್ವಜನಿಕರ ಸಹಕಾರವನ್ನು ಕೋರುತ್ತೇವೆ. ಭ್ರಷ್ಟಾಚಾರದ ವಿರುದ್ಧ ಕಾದಾಡಲು ನೀವು ಭ್ರಷ್ಟಾಚಾರ ನಿಗ್ರಹ
ದಳದೊಂದಿಗೆ ಸಹಭಾಗಿತ್ವ ವಹಿಸಬಹುದು. ವಿವಿಧ ಇಲಾಖೆಗಳಲ್ಲಿ ಅವ್ಯವಹಾರಗಳನ್ನು ಹೆಕ್ಕಿ ತೆಗೆಯುವಲ್ಲಿ
ಮಾಧ್ಯಮಗಳೂ ಸಹಾಯಕಾರಿಯಾಗಬಹುದು. ಭ್ರಷ್ಟ ಸಾರ್ವಜನಿಕ ಸೇವಕರು, ಅವರ ದಲ್ಲಾಳಿಗಳು, ಅವರ ಕಾರ್ಯವೈಖರಿ
ಹಾಗೂ ಭ್ರಷ್ಟರು ತಾವು ಅಡ್ಡದಾರಿಯಿಂದ ಗಳಿಸಿದ ಸಂಪತ್ತನ್ನು ಮುಚ್ಚಿಟ್ಟುಕೊಳ್ಳುವ ರೀತಿಗಳೇ ಮುಂತಾದವುಗಳನ್ನು
ಕಂಡುಹಿಡಿಯಲು ಜನತೆಯ ಹಾಗೂ ಮಾಧ್ಯಮಗಳ ಸಹಾಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅವಶ್ಯಕವಾಗಿದೆ.
ನಮ್ಮ ರಾಜ್ಯದಲ್ಲಿನ ಭ್ರಷ್ಟ ಹವ್ಯಾಸಗಳನ್ನು
ಹತ್ತಿಕ್ಕುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಕಾರ್ಯಪ್ರವೃತ್ತವಾಗಿದೆ. ದಳವು ತನ್ನ ಚಟುವಟಿಕೆಗಳ
ಮೂಲಕ ನಿಷ್ಠ ನಾಗರೀಕರಲ್ಲಿ ಅರಿವು ಮೂಡಿಸಲು ಪ್ರಾರಂಭಿಸಿದ್ದು, ಅಹವಾಲುಗಳನ್ನು ನೀಡಲೂ ಜನತೆಯು ಮುಂದು
ಬರುತ್ತಿದ್ದಾರೆ. ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳದ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿಯನ್ನೂ ಸಹ
ಸದರಿ ವೆಬ್ ಸೈಟ್ ನೀಡುತ್ತದೆ.
ಕರ್ನಾಟಕವನ್ನು ಭ್ರಷ್ಟಾಚಾರಮುಕ್ತ
ರಾಜ್ಯವನ್ನಾಗಿ ಮಾಡಲು ಸಾರ್ವಜನಿಕ ಜೀವನದಲ್ಲಿ ಭ್ರಷ್ಟತೆಯ ವಿರುದ್ಧದ ಹೋರಾಟಕ್ಕಾಗಿ ಜನತೆಯು ಕೈಜೋಡಿಸಲು
‘ಭ್ರಷ್ಟಾಚಾರ ನಿಗ್ರಹ ದಳ, ಕರ್ನಾಟಕ’ವು ಕೋರುತ್ತದೆ.