ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ

ಕರ್ನಾಟಕ ಸರ್ಕಾರ

cmk2
GOK > HGCD
Last modified at 14/12/2018 13:19 by hgcd

​​​

hgcd-slider hgcd-slider hgcd-slider hgcd-slider hgcd-slider hgcd-slider hgcd-slider

ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರರಕ್ಷಣಾ ನಿರ್ದೇಶನಾಲಯ

 

ಗೃಹರಕ್ಷಕದಳ

 

ರಾಜ್ಯದಲ್ಲಿನ ಗೃಹರಕ್ಷಕ ಸಂಸ್ಥೆಯು ಒಂದು ಸ್ವತಂತ್ರವಾದ, ಶಿಸ್ತುಬದ್ಧ ಹಾಗೂ ಸಮವಸ್ತ್ರ ಧಾರಿ ಸ್ವಯಂ ಸೇವಕರನ್ನು ಒಳಗೊಂಡಿದ್ದು, ಕರ್ನಾಟಕ ಗೃಹರಕ್ಷಕ ಕಾಯಿದೆ 1962 (1962 ರ ಕಾಯಿದೆ ಸಂಖ್ಯೆ 35) ರಲ್ಲಿ ರಚಿತಗೊಂಡಿದೆ.

ಗೃಹರಕ್ಷಕದಳ ಎಂಬ ನೂತನ ಸ್ವಯಂ ಸೇವಕ ಸಂಸ್ಥೆಯೊಂದು 1948 ರಲ್ಲಿ ಬೊಂಬಾಯಿಯಲ್ಲಿ ಪ್ರಾರಂಭಗೊಂಡಿತು. ದಿನಾಂಕ: 01-11-1956 ರಲ್ಲಿ ರಾಜ್ಯಗಳ ಪುನರ್ ರಚನೆಯ ನಂತರ ಮುಂಬೈ ಪ್ರಾಂತ್ಯದಿಂದ ನವ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡ ಬೆಳಗಾವಿ, ಬಿಜಾಪುರ, ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮಾತ್ರ 1948 ರಿಂದ 1962 ರ ವರೆಗೆ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿತ್ತು. ಅಕ್ಟೋಬರ್ 1962 ರಲ್ಲಿ ಕರ್ನಾಟಕ ಗೃಹರಕ್ಷಕ ಕಾಯಿದೆಯನ್ನು ರೂಪಿಸಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಪ್ರಥಮ ಮಹಾ ಸಮಾದೇಷ್ಟರಾಗಿ ಏಪ್ರಿಲ್ 1960 ರಲ್ಲಿ ಕಾರ್ಯವಹಿಸಿಕೊಂಡ ಶ್ರೀ ಆರ್.ಎ.ಮುಂಡ್ಕೂರ್, ಐಪಿಎಸ್., ಇವರು ಗೃಹರಕ್ಷಕ ದಳದ ರಚನೆಯ ಭದ್ರ ಬುನಾದಿಗೆ ಅಡಿಪಾಯ ಹಾಕಿದರು.

ಸಂಸ್ಥೆಯ ಸದಸ್ಯತ್ವವು ಸ್ವಯಂ ಇಚ್ಛೆಯಿಂದ ಕೂಡಿರುತ್ತದೆ. ಸಮುದಾಯದ ಸೇವೆ ಸಲ್ಲಿಸ ಬಯಸುವ ಎಲ್ಲಾ ವರ್ಗಗಳ ಸಾರ್ವಜನಿಕರಿಗೂ ಮುಕ್ತ ಅವಕಾಶವಿರುತ್ತದೆ. ನೋಂದಣಿಯಾದ ಎಲ್ಲಾ ಸದಸ್ಯರಿಗೂ ಮೂಲ ತರಬೇತಿಯನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗುವುದು. ಆಯ್ಕೆಮಾಡಿದ ಗೃಹರಕ್ಷಕರಿಗೆ ಪ್ರಗತಿಪರ ತರಬೇತಿಯನ್ನು ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ನೀಡಲಾಗುತ್ತಿದೆ. ಅವರಿಗೆ ನೀಡಲಾಗುವ ತರಬೇತಿಯು ಅವರನ್ನು ಸಮುದಾಯದ ಸೇವೆಯನ್ನು ಸಮರ್ಥವಾಗಿ ತುರ್ತು ಪರಿಸ್ಥಿತಿಗಳಲ್ಲಿ ಮತ್ತು ಕಾನೂನು ಮತ್ತು ಶಿಸ್ತುಪಾಲನಾ ಸಂದರ್ಭಗಳಲ್ಲಿ ಕ್ರಿಯಾಶೀಲರಾಗಿ ನಿರ್ವಹಿಸುವಂತೆ ತಯಾರುಮಾಡುತ್ತವೆ. ಹಬ್ಬ ಜಾತ್ರೆ, ಉತ್ಸವ, ಚುನಾವಣೆ ಇತ್ಯಾದಿ ಸಂದರ್ಭಗಳಲ್ಲಿ ಅವರ ಸೇವೆಯು ಸಮುದಾಯಕ್ಕೆ ಅನಿವಾರ್ಯವಾಗಿರುತ್ತದೆ.

ಪ್ರಾಧಿಕಾರಗಳಿಗೆ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಜೀವ, ಆಸ್ತಿ-ಪಾಸ್ತಿ ರಕ್ಷಿಸುವುದಕ್ಕೆ ಮತ್ತು ಸಮಾಜದಲ್ಲಿ ಕಾನೂನು ನಿಯಂತ್ರಣ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗುವಂತೆ, ಗೃಹರಕ್ಷಕ ಕಾಯಿದೆಯಲ್ಲಿ ವಿವರಿಸಿರುವ ಕರ್ತವ್ಯ ಮತ್ತು ಕಾರ್ಯವನ್ನು ನಿರ್ವಹಿಸಲೋಸುಗ ತಮ್ಮ ಸೇವೆಯನ್ನು ಸಮುದಾಯಕ್ಕಾಗಿ ಮುಡಿಪಾಗಿಡಲು ಬಯಸುವ ತಮ್ಮದೇ ಆದ ವೃತ್ತಿಗಳಲ್ಲಿರುವ, ಉತ್ಸಾಹಿ ಮಹಿಳೆಯರನ್ನು ಮತ್ತು ಪುರುಷರನ್ನು ಈ ಸಂಸ್ಥೆಯು ಒಳಗೊಂಡಿರುತ್ತದೆ. ಆಡಳಿತ, ಮಾರ್ಗದರ್ಶನ ಮತ್ತು ತರಬೇತಿ ನೀಡಲು ಅತ್ಯಲ್ಪ ಸಂಖ್ಯೆಯ ಸಿಬ್ಬಂದಿಯನ್ನು ಮಂಜೂರು ಮಾಡಲಾಗಿದೆ.

ಸಂಸ್ಥೆಯ ಆಡಳಿತ ಹಾಗೂ ನಿಯಂತ್ರಣದ ಅಧಿಕಾರವು ಡಿಜಿಪಿ ಮತ್ತು ಗೃಹರಕ್ಷಕದಳದ ಮಹಾ ಸಮಾದೇಷ್ಟರ ಅಧೀನದಲ್ಲಿರುತ್ತದೆ. ಇವರಿಗೆ (1) ಐಜಿಪಿ ಮತ್ತು ಗೃಹರಕ್ಷಕದಳದ ಅಪರ ಮಹಾ ಸಮಾದೇಷ್ಟರು (2) ಹಿರಿಯ ಸಿಬ್ಬಂದಿ ಅಧಿಕಾರಿ ಹಾಗೂ ಉಪ ಮಹಾ ಸಮಾದೇಷ್ಟರು (3) ಆಡಳಿತಾಧಿಕಾರಿಗಳು (4) ಲೆಕ್ಕಾಧಿಕಾರಿಗಳು ಹಾಗೂ ಸಮಾದೇಷ್ಟರು, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ ಮತ್ತು ಸಹಾಯಕ ಆಡಳಿತಾಧಿಕಾರಿ, ತರಬೇತಿ ಸಹಾಯಕರಾಗಿ ಇರುತ್ತಾರೆ.

ಪ್ರಸಕ್ತ ಕರ್ನಾಟಕ ರಾಜ್ಯ ಗೃಹರಕ್ಷಕ ದಳವು ದೇಶದಲ್ಲೇ ಒಂದು ಅತ್ಯುತ್ತಮ ಸಂಸ್ಥೆಯೆಂದು ಪರಿಗಣಿಸಲ್ಪಟ್ಟಿದೆ.

ಗೃಹರಕ್ಷಕ ದಳದ ಧ್ಯೇಯವು "ನಿಷ್ಕಾಮ ಸೇವೆ"ಯಾಗಿರುತ್ತದೆ.

ಸಂಖ್ಯಾಬಲ:

ಪ್ರಸ್ತುತ ಗೃಹರಕ್ಷಕದಳದ ಎಲ್ಲಾ 31 ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಬೆಂಗಳೂರು ಮಹಾ ನಗರದ ಜನ ಸಾಂದ್ರತೆಯನ್ನು ಹಾಗೂ ಕಾರ್ಯ ಚಟುವಟಿಕೆಗಳ ಅನುಸಾರ ಬೆಂಗಳೂರು ಜಿಲ್ಲಾ ಗೃಹರಕ್ಷಕದಳವನ್ನು ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ  ಹಾಗೂ ಬೆಂಗಳೂರು ದಕ್ಷಿಣ  ಎಂದು 03 ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿರುವ ಗೃಹರಕ್ಷಕರ ಸಂಖ್ಯೆ 25000​ ಈ ಸಂಸ್ಥೆಯ ಪ್ರಾಮುಖ್ಯತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಗೃಹರಕ್ಷಕರ ಸಂಖ್ಯಾಬಲವನ್ನು 30000 ಕ್ಕೆ ಹೆಚ್ಚಿಸಿರುತ್ತದೆ, ಪ್ರಸ್ತುತ 4279 ಮಹಿಳಾ ಗೃಹರಕ್ಷಕರು ಒಳಗೊಂಡಂತೆ 25406 ಮಂದಿ ಗೃಹರಕ್ಷಕರು ಹಾಜರಿ ಪಟ್ಟಿಯಲ್ಲಿರುತ್ತಾರೆ. ಯಾದಗಿರಿ ಜಿಲ್ಲೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಗೃಹರಕ್ಷಕಿಯರು ಇರುತ್ತಾರೆ.

ತರಬೇತಿ:

ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿ, ಇತರೆ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನಗಳಲ್ಲಿ ಮೂಲ ತರಬೇತಿ, ರಾಜ್ಯದ ಇತರೆ ಜಿಲ್ಲೆಗಳಿಂದ ಬರುವ ಗೃಹರಕ್ಷಕರಿಗೆ ಪ್ರಗತಿಪರ ತರಬೇತಿ ನೀಡಲು ಮತ್ತು ಇತರೆ ರಾಜ್ಯಗಳ ಗೃಹರಕ್ಷಕರಿಗೆ ಮತ್ತು ಸಿಬ್ಬಂದಿಗೆ ವಾಟರ್‍ಮನ್‍ಶಿಪ್ ತರಬೇತಿ ನೀಡಲು ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ ಎಂಬ ನಾಮದೇಯದೊಂದಿಗೆ ನಂ.1, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ, ಹಲಸೂರು ಕೆರೆಯ ಪಶ್ವಿಮ ದಂಡೆ, ಬೆಂಗಳೂರು-560 042 ಇಲ್ಲಿ ಸುಸಜ್ಜಿತವಾದ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ 50 ಜನ ಶಿಕ್ಷಣಾರ್ಥಿಗಳಿಗೆ ವಸತಿ ಸೌಕರ್ಯದೊಂದಿಗೆ ತರಬೇತಿ ವ್ಯವಸ್ಥೆಗೊಳಿಸಲಾಗಿದೆ.

ಇಲಾಖೆಯ ಚಟುವಟಿಕೆಗಳ ಕಾರ್ಯವಿಧಾನ :

ಗೃಹರಕ್ಷಕ ಇಲಾಖೆಯು ಕರ್ನಾಟದ ಸರ್ಕಾರದ ಗೃಹ ಖಾತೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದರ ಕಾರ್ಯಚಟುವಟಿಕೆಗಳನ್ನು ಕೆಳಕಾಣಿಸಿರುವ ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

1) ರಾಜ್ಯಮಟ್ಟದ ಕೇಂದ್ರಕಾರ್ಯಸ್ಥಾನದಿಂದ ಡಿಜಿಪಿ ಮತ್ತು ಮಹಾ ಸಮಾದೇಷ್ಟರು, ಗೃಹರಕ್ಷಕದಳ ಇವರಿಂದ ಇಲಾಖೆಯು ನಿಯಂತ್ರಿಸಲ್ಪಡುತ್ತಿದೆ. ಇವರು ಗೃಹರಕ್ಷಕ ಕಾಯಿದೆಯಲ್ಲಿ ಮತ್ತು ಅದರ ಅಡಿಯಲ್ಲಿ ರೂಪಿತವಾಗಿರುವ ಗೃಹರಕ್ಷಕ ನಿಯಮಾವಳಿಗಳು ಮತ್ತು ಗೃಹರಕ್ಷಕ ಕೈಪಿಡಿಯಲ್ಲಿ ವಿವರಿಸಿರುವ ಅವಕಾಶಗಳನ್ನು ಅನುಷ್ಠಾನಗೊಳಿಸುತ್ತಾರೆ.

2) ಜಿಲ್ಲಾ ಮಟ್ಟದಲ್ಲಿ ಗೌರವ ಜಿಲ್ಲಾ ಸಮಾದೇಷ್ಟರು, ನಿಯಂತ್ರಣಾಧಿಕಾರಿಗಳ ಆದೇಶಗಳನ್ನು ಅನುಷ್ಠಾನಗೊಳಿಸುತ್ತಾರೆ. ಇವರಿಗೆ ತಾಲ್ಲೂಕು ಮಟ್ಟದಲ್ಲಿ ಗೌರವ ತಾಲ್ಲೂಕು ಘಟಕಾಧಿಕಾರಿಗಳು ಮತ್ತು ಪ್ರಮುಖ ನಗರ ಸ್ಥಳಗಳ ಗೌರವ ಘಟಕಾಧಿಕಾರಿಗಳು ಸಹಾಯಕರಾಗಿರುತ್ತಾರೆ.

3) ಪ್ರಗತಿಪರ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದ ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ತರಬೇತಿ ಅಕಾಡೆಮಿಯ ಸಮಾದೇಷ್ಟರು ಜಾರಿಗೊಳಿಸುತ್ತಾರೆ.

ಇಲಾಖೆಯ ಉದ್ದೇಶಗಳು:

1) ಶಾಂತಿ, ಶಿಸ್ತು ಮತ್ತು ಕಾನೂನು ಪಾಲನೆ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುವುದು.

2) ಅತ್ಯಾವಶ್ಯಕ ಸೇವೆಗಳ ಪಾಲನೆ.

3) ಪ್ರಾಕೃತಿಕ ಮತ್ತು ಮಾನವ ನಿರ್ಮಿತ ವಿಕೋಪಗಳ ಸಂದರ್ಭಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ.

4) ಸೂಕ್ಷ್ಮ ಸ್ಥಾವರಗಳಿಗೆ ಭದ್ರತೆ ಒದಗಿಸುವುದು.

ನಮ್ಮ ಮುನ್ನೋಟ 2030

ಇಲಾಖೆಯು ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ (ಪ್ರವಾಹಕ್ಕೆ ತುತ್ತಾಗಲಿರುವ ಸ್ಥಳಗಳಲ್ಲಿ) ಪ್ರಾದೇಶಿಕ ತರಬೇತಿ ಕೇಂದ್ರವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ತರಬೇತಿ ಕೇಂದ್ರಗಳನ್ನು ಮತ್ತು ಗೃಹರಕ್ಷಕರನ್ನು ಬಂದೋಬಸ್ತ್ ಕರ್ತವ್ಯಕ್ಕೆ/ತರಬೇತಿಗಳಿಗೆ ಕರೆಸಿಕೊಂಡಾಗ ತಂಗಲು ವಸತಿ ಸೌಕರ್ಯ ಇರುವಂತಹ ಕಟ್ಟಡಗಳನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹೊಂದುವುದು, ಕನಿಷ್ಠ ರೋಲ್‍ನಲ್ಲಿರುವ ಶೇಕಡಾ 25 ರಷ್ಟು ಗೃಹರಕ್ಷಕರಿಗೆ ಪ್ರಗತಿಪರ ತರಬೇತಿ ನೀಡುವುದು.

ಪ್ರಸಕ್ತ ರಾಜ್ಯದ ನಿಗದಿತ ಸಂಖ್ಯಾಬಲವು 25000 ಆಗಿರುತ್ತದೆ. 2030 ರ ವತಿಗೆ ಈ ಸಂಖ್ಯಾಬಲವನ್ನು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಶೇಕಡಾ 50 ರಷ್ಟನ್ನು ಏರಿಸಬಹುದು. ಈ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲು ಕ್ರಮ ಕೈಗೊಳ್ಳುವುದು.

ಇಲಾಖೆಯ ಕಾಯಿದೆ ಅಧಿನಿಯಮ ಮತ್ತು ಅಧಿಸೂಚನೆ

ಗೃಹರಕ್ಷಕ ಕಾಯಿದೆಯು 1962 ರಲ್ಲಿ ಜಾರಿಗೆಯಾಗಿರುತ್ತದೆ. ಇದು ಅಗತ್ಯ ಸಂದರ್ಭಗಳಲ್ಲಿ ಪೊಲೀಸ್ ಬಲವನ್ನು ವೃದ್ಧಿಸಲು ಒಂದು ಸಹಾಯಕ ಪಡೆಯನ್ನು ರಚಿಸುವುದಕ್ಕೆ ಸರ್ಕಾರಕ್ಕೆ ಅವಕಾಶಮಾಡಿಕೊಟ್ಟಿದೆ. ಸಹಾಯಕ ಪಡೆಯ ವಿವಿಧ ಹಂತದ ಆಡಳಿತಾಧಿಕಾರಿಗಳ ಮತ್ತು ಬೆಂಬಲ ಅಧಿಕಾರಿಗಳ ಗೌರವ ಸದಸ್ಯರ ನೇಮಕಕ್ಕೆ ಮತ್ತು ಅವರ "ಕಾರ್ಯ, ಕರ್ತವ್ಯ ಮತ್ತು ಶಿಸ್ತಿನ" ಬಗ್ಗೆ ವಿವರಿಸಿ ಕಾಯ್ದೆಯಲ್ಲಿರುವ ಉದ್ದೇಶವನ್ನು ಜಾರಿಗೊಳಿಸುವುದಕ್ಕೆ ಸರ್ಕಾರವು ನಿಯಮಾವಳಿಯನ್ನು ರೂಪಿಸುವುದಕ್ಕೂ ಅವಕಾಶಮಾಡಿಕೊಡುತ್ತದೆ.

ಗೃಹರಕ್ಷಕ ನಿಯಮಾವಳಿ:

ಈ ನಿಯಮಾವಳಿಯನ್ನು ಸರ್ಕಾರವು 1963 ರಲ್ಲಿ ರಚಿಸಿರುತ್ತದೆ. ಇದನ್ನು ಕರ್ನಾಟಕ ಗೃಹರಕ್ಷಕ ನಿಯಮಾವಳಿ 1963 ಎಂದು ಹೆಸರಿಸಲಾಗಿದೆ. ಇದು ಸರ್ಕಾರಕ್ಕೆ ಗೃಹರಕ್ಷಕ ಕಾಯಿದೆಯನ್ನು ಅನುಷ್ಠಾನಗೊಳಿಸಲು ಅನುಸರಿಸಬೇಕಾದ ನಿಯಮ ಮತ್ತು ಕ್ರಮಗಳನ್ನು ವಿವರಿಸಿದೆ. ಇದರಲ್ಲಿ ಜಿಲ್ಲಾ ಸಮಾದೇಷ್ಟರ ಮತ್ತು ಇತರ ಸಂಸ್ಥೆಯ ಗೌರವ ಸದಸ್ಯರ ನೇಮಕಾತಿ ಕ್ರಮವನ್ನೂ ವಿವರಿಸುತ್ತದೆ.

ಗೃಹರಕ್ಷಕ ಕೈಪಿಡಿ

ಕಾರ್ಯ ನಿರ್ವಹಣೆ ವಿಭಾಗದಲ್ಲಿ ಗೃಹರಕ್ಷಕದಿಂದ ಹಿಡಿದು ಡಿಜಿಪಿ ಮತ್ತು ಗೃಹರಕ್ಷಕದಳದ ಮಹಾ ಸಮಾದೇಷ್ಟರವರೆವಿಗೂ, ಲಿಪಿಕ ಸಿಬ್ಬಂದಿಯ ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕ ರಿಂದ ಆಡಿಟ್ ಆಡಳಿತಾಧಿಕಾರಿಯವರೆಗೆ ಮತ್ತು ತರಬೇತಿ ವಿಭಾಗದಲ್ಲಿ ಸೈನಿಕ್‍ರಿಂದ ಸಮಾದೇಷ್ಟರವರೆಗಿನ ಹುದ್ದೆಗಳ ಕರ್ತವ್ಯ ಮತ್ತು ಜವಾಬ್ದಾರಿಯನ್ನು, ಗೃಹರಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ ನೀಡಬೇಕಾದ ಮತ್ತು ರಾಜ್ಯಮಟ್ಟದಲ್ಲಿ ನೀಡಬೇಕಾದ ತರಬೇತಿಗಳನ್ನೂ ವಿವರಿಸುತ್ತದೆ. ಬೋಧಕರಿಗೆ ರಾಜ್ಯಮಟ್ಟದ ತರಬೇತಿ ಕೇಂದ್ರದಲ್ಲಿ ಮತ್ತು ಅಂತರರಾಜ್ಯ ತರಬೇತಿ ಕೇಂದ್ರಗಳಲ್ಲಿ ನೀಡಬೇಕಾದ ತರಬೇತಿಗಳನ್ನು ವಿವರಿಸುತ್ತದೆ. ಕೈಪಿಡಿಯು ಗೃಹರಕ್ಷಕರಿಗೆ ನೀಡಬೇಕಾದ ಭತ್ಯೆಗಳು, ಸಮವಸ್ತ್ರದ ಪ್ರಮಾಣ, ಕರ್ತವ್ಯದಲ್ಲಿದ್ದಾಗ ಅವರಿಗೆ ಇರುವ ಅಧಿಕಾರ, ಸೇವೆಯನ್ನು ಗುರುತಿಸುವ ಪ್ರೋತ್ಸಾಹಕಗಳು ಅನುಗ್ರಹಪೂರ್ವಕ ಪಾವತಿಗಳು ಮತ್ತು ಕಲ್ಯಾಣ ಕ್ರಮದ ಬಗ್ಗೆಯೂ ವಿವರಿಸುತ್ತದೆ.

ಪೌರರಕ್ಷಣೆ

ನಾಗರಿಕ ರಕ್ಷಣೆ ಎಲ್ಲರ ಜವಾಬ್ದಾರಿ. ಏಕೆಂದರೆ ನಾಗರಿಕರಿಂದಲೇ ನಾಗರಿಕರ ರಕ್ಷಣೆಯಾಗಬೇಕೆಂಬುದು ಇದರ ಮುಖ್ಯ ತತ್ವ. ನಿಮ್ಮ ನಗರದ, ನಿಮ್ಮ ನೆರೆ ಹೊರೆಯ, ನಿಮ್ಮ ಮನೆಯ ಹಾಗೂ ನಿಮ್ಮ ಸ್ವಂತದ ಸಂರಕ್ಷಣೆಯಲ್ಲಿ ನೀವು ವ್ಯಕ್ತಿಗತವಾಗಿ ಹಾಗೂ ಪೌರರಾಗಿ ವಹಿಸುವ ಪಾತ್ರ ಅತಿ ಮಹತ್ವವಾದದು.

ನಾಗರಿಕ ರಕ್ಷಣೆಯ ಕಾರ್ಯಾಚರಣೆಗೆ ಅತಿ ದೊಡ್ಡ ಪ್ರಮಾಣದ ಹಾಗೂ ನಿರಂತರದ ಮಾನವ ಸಂಖ್ಯಾಬಲ ಅಗತ್ಯವಾಗಿರುವುದರಿಂದ ಅದನ್ನು ಹಣ ನೀಡಿ ಪಡೆಯುವುದು ಸಾಧ್ಯವಲ್ಲ; ಮೂಲತಃ ಸ್ವಯಂಪ್ರೇರಿತವಾಗಿದ್ದಲ್ಲಿ ಮಾತ್ರ ಸಾಧ್ಯ.

ಪೌರರಕ್ಷಣಾ ಸಂಸ್ಥೆಯು ಗೃಹರಕ್ಷಕದಳದೊಟ್ಟಿಗೆ ಕಾರ್ಯ ನಿರ್ವಹಿಸುತ್ತಿರುವ ಒಂದು ಸ್ವತಂತ್ರ ಸ್ವಯಂ ಸೇವಾ ಸಂಸ್ಥೆಯಾಗಿದೆ. ಬಾಹ್ಯ ಆಕ್ರಮಣ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಜನ ಸಾಮಾನ್ಯರ ಜೀವ ಮತ್ತು ಆಸ್ತಿ ಸುರಕ್ಷಣೆ ಮಾಡುವುದು ಈ ಸಂಸ್ಥೆಯು ಮುಖ್ಯ ಗುರಿಯಾಗಿದೆ. ಪೌರರಕ್ಷಣಾ ದಳವು ವಿವಿಧ ಪೌರರಕ್ಷಣಾ ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತನ್ನ ಸೇವೆಯನ್ನು ಸಮುದಾಯಕ್ಕೆ ಒದಗಿಸಲು ನಾಗರಿಕರನ್ನು ಸ್ವಯಂ ಸೇವಕರನ್ನಾಗಿ ಭರ್ತಿ ಮಾಡಿಕೊಂಡು ಅವರಿಗೆ ಪೌರರಕ್ಷಣಾ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿನ ಬೆಂಗಳೂರು ನಗರ, ಉತ್ತರಕನ್ನಡ ಜಿಲ್ಲೆಯ ಮಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಶಕ್ತಿನಗರವನ್ನು ಎರಡನೇ ದರ್ಜೆಯ ಪೌರರಕ್ಷಣಾ ಪಟ್ಟಣಗಳನ್ನಾಗಿ ಘೋಷಿಸಿ ಅದೇ ರೀತಿ ಮುಂದುವರೆಸಿರುತ್ತದೆ.

ಈ ಜಿಲ್ಲೆಗಳಲ್ಲಿ ಪೌರರಕ್ಷಣಾ ನಿಯಂತ್ರಕರನ್ನು ನೇಮಕ ಮಾಡಲಾಗಿದ್ದು, ಪೌರರಕ್ಷಣಾ Pಚಿಠಿeಡಿ ಠಿಟಚಿಟಿ ನ ಅನುಗುಣವಾಗಿ ಪೌರರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಈ ಇಲಾಖೆಗೆ ಡಿಜಿಪಿ ಶ್ರೇಣಿಯ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಗೃಹರಕ್ಷಕದಳದ ಮಹಾ ಸಮಾದೇಷ್ಟರೇ ಈ ಹುದ್ದೆಯನ್ನೂ ಪದನಿಮಿತ್ತ ಹೊಂದಿರುತ್ತಾರೆ.

ಐಜಿಪಿ ಶ್ರೇಣಿಯಲ್ಲಿ ಅಪರ ನಿರ್ದೇಶಕರು ಮತ್ತು ಆರಕ್ಷಕ ಅಧೀಕ್ಷಕರ ಶ್ರೇಣಿಯ ಉಪ ನಿರ್ದೇಶಕರು, ನಿರ್ದೇಶಕರ ಅಧೀನದಲ್ಲಿ ಪೌರರಕ್ಷಣಾ ಇಲಾಖೆಯ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಹಾಯಕರಾಗಿರುತ್ತಾರೆ. ಗೃಹರಕ್ಷಕದಳದ ಅಪರ ಮಹಾ ಸಮಾದೇಷ್ಟರು ಮತ್ತು ಉಪ ಮಹಾ ಸಮಾದೇಷ್ಟರುಗಳೇ ಅನುಕ್ರಮವಾಗಿ ಈ ಹುದ್ದೆಗಳನ್ನೂ ಪದನಿಮಿತ್ತ ಹೊಂದಿದ್ದು ಕಾರ್ಯ ನಿರ್ವಹಿಸುತ್ತಾರೆ.

ಇಲಾಖಾ ಮುಖ್ಯಸ್ಥರಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಪೌರರಕ್ಷಣಾ ಕೇಂದ್ರ ಕಾರ್ಯ ಸ್ಥಾನದ ಸೇವೆಗಳ ನಿಯಂತ್ರಕರಾಗಿ ಸಹಾಯಕರಾಗಿರುತ್ತಾರೆ. ಹಾಗೆಯೇ ಉತ್ತರಕನ್ನಡ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮಲ್ಲಾಪುರ ಮತ್ತು ಶಕ್ತಿನಗರ ಪೌರರಕ್ಷಣಾ ಪಟ್ಟಣಗಳ ನಿಯಂತ್ರಕರಾಗಿ ಸಹಾಯಕರಾಗಿರುತ್ತಾರೆ.

ಭಾರತ ಸರ್ಕಾರವು ರಚಿಸಿದ ಪೌರರಕ್ಷಣಾ ಕಾಯ್ದೆ 1968 ಮತ್ತು ಅದರ ಅಡಿಯಲ್ಲಿ ರೂಪಿಸಿದ ಪೌರರಕ್ಷಣಾ ನಿಯಮಗಳು 1968 ರ ಅನ್ವಯ ಪೌರರಕ್ಷಣಾ ಚಟುವಟಿಕೆಗಳನ್ನು ಜಾರಿಗೊಳಿಸಲಾಗುತ್ತಿದೆ. ಭಾರತ ಸರ್ಕಾರವು ಸಿಬ್ಬಂದಿ ಸಂಖ್ಯಾಬಲದ ಮಾದರಿಯ ಬಗ್ಗೆ ಹೊರಡಿಸಿರುವ ಆದೇಶಗಳನ್ನು ಕ್ರೋಢೀಕರಿಸಿ ಮಾಸ್ಟರ್ ಪ್ಲಾನ್ ಎಂಬ ಪುಸ್ತಕ ಪ್ರಕಟಪಡಿಸಿದೆ.

ಕೇಂದ್ರ ಸರ್ಕಾರದಿಂದ ಒದಗಿಸುವ ದನಸಹಾಯದ ಬಗ್ಗೆ ಹೊರಡಿಸಿರುವ ಆದೇಶಗಳನ್ನು ಕ್ರೋಢೀಕರಿಸಿ ಕಂಪೆಂಡಿಯಂ ಆಫ್ ಇನ್‍ಸ್ಟ್ರಕ್ಷನ್ಸ್ ಎಂದು ಹೆಸರಿಸಿ ಪುಸ್ತಕ ಪ್ರಕಟಗೊಳಿಸಿದೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿರುವ ಪೌರರಕ್ಷಣಾ ದಳದ ನಗರಗಳಿಗೆ ಅನ್ವಯವಾಗುವ ವರ್ಗೀಕರಣದ ಆಧಾರದ ಮೇಲೆ ಒದಗಿಸಬೇಕಾದ ಸೇವೆಗಳ ಬಗ್ಗೆ ಪೌರರಕ್ಷಣಾ ದಳದ ಸಾಮಾನ್ಯ ಸೂತ್ರಗಳನ್ನು ಜನರಲ್ ಪ್ರಿನ್ಸಿಪಲ್ಸ್ ಆಫ್ ಸಿವಿಲ್ ಡಿಫೆನ್ಸ್ ಎಂದು ಹೆಸರಿಸಿ ಕ್ರೋಢೀಕೃತ ಮಾಹಿತಿಯ ಬಗ್ಗೆ ಪುಸ್ತಕ ಪ್ರಕಟಿಸಿದೆ.

ಮುನ್ನೋಟ (ಇಲಾಖೆಯ ಪ್ರಗತಿಯ ಬಗ್ಗೆ ಹೊಂದಿರುವ ಗುರಿ)

ಬೆಂಗಳೂರು ನಗರವನ್ನು ಪೌರರಕ್ಷಣಾ ವಾರ್ಡನ್ ಸೇವೆಗಳಿಗಾಗಿ 50 ಡಿವಿಜನ್‍ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಡಿವಿಜನ್‍ಗೆ ಕನಿಷ್ಠ 122 ಪೌರರಕ್ಷಣಾ ಸ್ವಯಂ ಸೇವಕರನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 10,000 ವಾರ್ಡ್‍ನ್ ಪೌರರಕ್ಷಣಾ ಸ್ವಯಂ ಸೇವಕರನ್ನು ಭರ್ತಿ ಮಾಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಸಧ್ಯದಲ್ಲಿ 7000 ಸ್ವಯಂ ಸೇವಕರನ್ನು ನೊಂದಾಯಿಸಿಕೊಳ್ಳಲಾಗಿದೆ. ಇದು ಇಲಾಖೆಗೆ ಇತರೆ ಎರಡನೇ ದರ್ಜೆ ಪೌರರಕ್ಷಣಾ ನಗರಗಳಿಗೆ ಒದಗಿಸಬೇಕಾದ ಪೌರರಕ್ಷಣಾ ಸೇವೆಗಳನ್ನು ಬೆಂಗಳೂರಿನಲ್ಲಿ ಚುರುಕುಗೊಳಿಸಲು ಸಾಧ್ಯವಾಗುವಂತೆ ಮಾಡಿದೆ. ವಾರ್ಡ್‍ನ್ ಸೇವೆಯನ್ನು ಒಳಗೊಂಡಂತೆ ಒದಗಿಸಬೇಕಾದ ಇತರ ಎಲ್ಲಾ ಸೇವೆಗಳಿಗೂ ಸೇರಿ ಒಟ್ಟು ಒಂದು ಲಕ್ಷ ಸ್ವಯಂ ಸೇವಕರನ್ನು ನೊಂದಾಯಿಸಿಕೊಳ್ಳುವ ಉದ್ದೇಶವಿರುತ್ತದೆ.

ನೊಂದಣಿಯಾಗಿರುವ ಪೌರರಕ್ಷಣಾ ವಾರ್ಡನ್‍ಗಳೂ ವಿವಿಧ ಪೌರರಕ್ಷಣಾ ಸೇವೆಗಳನ್ನು ಕಾರ್ಯಗತಗೊಳಿಸಲು ಸಮರ್ಥರಾಗುವಂತೆ ವಿವಿಧ ತರಬೇತಿಗಳನ್ನು ಪ್ರಸ್ತಾವಿಸಿದೆ. ಇಲಾಖೆಯ ಬೆಂಗಳೂರು ನಗರದ ವಿವಿಧ ಪ್ರಮುಖ ಸ್ಥಳಗಳನ್ನು ಗುರುತಿಸಿ ಮಾಲುಗಳು, ಚಿತ್ರಮಂದಿಗಳು, ಶಾಲೆಗಳು ಇತ್ಯಾದಿ ಜನ ನಿಬಿಡ ಸ್ಥಳಗಳಲ್ಲಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಾತ್ಯಕ್ಷಿಕೆ ಹಾಗೂ ಅಣುಕು ಪ್ರದರ್ಶನಗಳನ್ನು ಏರ್ಪಡಿಸಿ ತಿಳುವಳಿಕೆ ಮೂಡಿಸಲು ಏರ್ಪಾಡು ಮಾಡುತ್ತಿದೆ. ಈಗಾಗಲೇ 100 ಅಣುಕು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ 100 ಸ್ಥಳಗಳಲ್ಲಿ ಅಣುಕು ಪ್ರದರ್ಶನಗಳನ್ನು ಏರ್ಪಡಿಸಲು ಉದ್ದೇಶಿಸಿದ್ದು, ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಲಕ್ಷ ಬೆಂಗಳೂರು ನಾಗರಿಕರಿಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ

ಇಲಾಖೆಯ ಉದ್ದೇಶಗಳು

ಪೌರರಕ್ಷಣಾ ಇಲಾಖೆಯ ಪ್ರಮುಖ ಉದ್ದೇಶವು ಜೀವಗಳನ್ನು ಉಳಿಸುವುದು, ಜನ ಸಾಮಾನ್ಯರ ಆಸ್ತಿ ಪಾಸ್ತಿಗಳಿಗೆ ಶತ್ರು ದಾಳಿಯಿಂದ, ಮಾನವ ನಿರ್ಮಿತ ಪ್ರಕೃತಿ ವಿಕೋಪಗಳಿಂದ ಉಂಟಾಗಬಹುದಾದ ಹಾನಿಯನ್ನು ಕಡಿಮೆಗೊಳಿಸುವುದು ಮತ್ತು ಉತ್ಪಾದನೆಯು ನಿರಂತರವಾಗಿರುವಂತೆ ಕಾಯ್ದುಕೊಳ್ಳುವುದಕ್ಕೆ ನಾಗರೀಕರಿಗೆ ಸಹಾಯ ಹಸ್ತ ನೀಡುವುದ್ದಾಗಿದೆ. ಪೌರರಕ್ಷಣಾ ಕ್ರಮಗಳು ಇಲಾಖೆಗಳು ನಿರ್ವಹಿಸುವ ಸಾಮಾನ್ಯ ಕರ್ತವ್ಯಗಳನ್ನು ತುರ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ರೂಪಿಸುವ ವಿಸ್ತøತ ಭಾಗವಾಗಿರುತ್ತದೆ.

ಪೌರರಕ್ಷಣಾ ಕ್ರಮಗಳು ಕೆಳಕಂಡ ಸೇವೆಗಳನ್ನು ಒಳಗೊಂಡಿದೆ.

1) ತರಬೇತಿ ಹಾಗೂ ಮನವರಿಕೆ

2) ಸಮನ್ವಯಗೊಳಿಸುವುದು ಮತ್ತು ನಿಯಂತ್ರಣಕ್ಕೊಳಪಟ್ಟ ಎಚ್ಚರಿಕಾ ಕ್ರಮ

3) ಗಾಯಾಳುಗಳನ್ನು ರಕ್ಷಿಸುವುದು

4) ಪ್ರಥಮ ಚಿಕಿತ್ಸೆ

5) ಸುರಕ್ಷಿತಾ ಪ್ರದೇಶ/ಭಾಗಕ್ಕೆ ಸಾಗಿಸುವುದು, ನಿರಾಶ್ರಿತರಿಗೆ ಪುನರ್ ವಸತಿ ಅತ್ಯಾವಶ್ಯಕ ಸಾಮಗ್ರಿಗಳ ಶೇಖರಣೆ ಮತ್ತು ಹಂಚುವಿಕೆ

6) ಆಸ್ಪತ್ರೆಗಳನ್ನು ಮೀಸಲಿರಿಸುವುದು, ವೈದ್ಯರು ಮತ್ತು ದಾದಿಯರ ಸಿಬ್ಬಂದಿ ಒದಗಿಸುವುದು

7) ತುರ್ತು ಒಳಚರಂಡಿ ಮತ್ತು ಪರ್ಯಾಯ ನೀರು ಸರಬರಾಜು ವ್ಯವಸ್ಥೆ ಏರ್ಪಡಿಸುವುದು

8) ಸಾರಿಗೆ ವ್ಯವಸ್ಥೆ ಕ್ರೋಢೀಕರಿಸುವುದು

9) ಮನೆಗಳ ದುರಸ್ತಿ

10) ಬೆಳಕುಗಳ ನಿಯಂತ್ರಣ, ಸೂಕ್ಷ್ಮ ಸ್ಥಾವರಗಳನ್ನು ದಾಳಿಯಿಂದ ಕೃತ್ರಿಮಾಚ್ಛಾದನೆ ಮೂಲಕ ಬಚ್ಚಿಡುವುದು

11) ಬೆಳೆ ಬಾಳುವ ವಸ್ತುಗಳ ಸಂರಕ್ಷಣೆ

12) ಅತ್ಯಾವಶ್ಯಕ ಸೇವೆಗಳು ಮತ್ತು ಸೂಕ್ಷ್ಮ ಕೈಗಾರಿಕೆಗಳನ್ನು ರಕ್ಷಿಸಲು ವಿಶೇಷ ಕ್ರಮಗಳು

13) ಪ್ರಚಾರ ನೀಡುವುದು, ಸಾರ್ವಜನಿಕರ ಸಹಕಾರ ಪಡೆಯುವುದು

ಅಧಿನಿಯಮ, ನಿಯಮಗಳ ಹಾಗೂ ಅಧಿಸೂಚನೆ :-

ಪೌರರಕ್ಷಣಾ ಅಧಿನಿಯಮ – 1968

1. ಅದಿನಿಯಮದ ಹೆಸರು – ಪೌರರಕ್ಷಣಾ ಅದಿನಿಯಮ – 1968

2. ಕ್ಷೇತ್ರಾಧಿಕಾರ ವ್ಯಾಪ್ತಿ – ಭಾರತದ ಎಲ್ಲಾ ಪ್ರದೇಶಗಳು.

3. ಪರಿಭಾಷೆ – ರಕ್ಷಣೆಯನ್ನು ವಾಸ್ತವಿಕ ಯುದ್ಧದ ಮೂಲಕ ಒದಗಿಸುವುದನ್ನು ಹೂರತುಪಡಿಸಿ ಜನರಿಗೆ ಹಾಗೂ ಆಸ್ತಿ-ಪಾಸ್ತಿಗಳಿಗೆ, ಭಾರತದಲ್ಲಿರುವ ವಸ್ತುಗಳಿಗೆ ಮತ್ತು ಯಾವುದೇ ಪ್ರಾಂತ್ಯದ ಭಾಗಗಳಿಗೆ ಆಕ್ರಮಣಗಳಿಂದ ಅಂದರೆ, ಬಾಹ್ಯಕಾಶ ಭೂಮಿ ಹಾಗೂ ಸಮುದ್ರ ದಾಳಿಯಿಂದ ಇತರ ಸಂರಕ್ಷಣಾ ಕಾರ್ಯ ಚಟುವಟಿಕೆಗಳಲ್ಲಿ ದಾಳಿ ವೇಳೆ ಹಾಗೂ ನಂತರದ ಸಮಯಗಳಲ್ಲಿ ತೊಡಗಿಸಬಹುದಾಗಿರುತ್ತದೆ.

4. ಪೌರರಕ್ಷಣಾ ನಿಯಮಗಳನ್ನು ರಚಿಸುವ ಅಧಿಕಾರ :- ಕೇಂದ್ರ ಸರ್ಕಾರಕ್ಕೆ ಪೌರರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವುದಕ್ಕೆ ಅಧಿನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

5. ಪೌರರಕ್ಷಣಾ ದಳ:- ರಾಜ್ಯ ಸರ್ಕಾರದವು ವ್ಯಕ್ತಿಗಳ ಸಮೂಹದ ಒಂದು ಸಂಸ್ಥೆಯನ್ನು ಪೌರರಕ್ಷಣಾ ದಳ ಎಂಬ ಹೆಸರಿನಲ್ಲಿ ರಚಿಸಲು ಮತ್ತು ಈ ದಳಕ್ಕೆ ಜಿಲ್ಲಾ ದಂಡಾಧಿಕಾರಿಯ ಶ್ರೇಣಿಗಿಂತ ಕಡಿಮೆ ಇಲ್ಲದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.

6. ಇದು ರಾಜ್ಯ ಸರ್ಕಾರವು ಈ ಪೌರರಕ್ಷಣಾ ನಿಯಂತ್ರಕರನ್ನು ಮತ್ತು ಸದಸ್ಯರನ್ನು ನೇಮಕ ಮಾಡುವ ಹಾಗೂ ವಜಾ ಮಾಡುವ ಅಧಿಕಾರ ನೀಡುತ್ತದೆ.

7. ಇದು ಮೇಲ್ಮನವಿಯ ವಿಷಯದ ಬಗ್ಗೆಯೂ ಅವಕಾಶ ಮಾಡಿಕೊಡುತ್ತದೆ.

ಪೌರರಕ್ಷಣಾ ನಿಯಮಗಳು – 1968 :-

ಪೌರರಕ್ಷಣಾ ನಿಯಮಗಳು 1968, ಈ ಕೆಳಕಂಡ ಕಾರ್ಯಚರಣೆಗಳನ್ನು ಪೌರರಕ್ಷಣಾ ಸ್ವಯಂಸೇವಕರು ಕರ್ತವ್ಯ ನಿರ್ವಹಣಾ ಸಮಯದಲ್ಲಿ ಜಾರಿಗೊಳಿಸಬೇಕಾಗುತ್ತದೆ.

1. ಬೆಳಕುಗಳ ನಿಯಂತ್ರಣೆ.

2. ಬೆಂಕಿ ಉದ್ಭವವಾಗದಂತೆ ಮತ್ತು ಹರಡದಂತೆ ಕ್ರಮಗಳನ್ನು ತೆಗೆದುಕೊಳ್ಳುವುದು.

3. ಕೃತ್ರಿಮಾಚ್ಛದನೆ.

4. ಅಪಾಯಕರ ವಸ್ತುಗಳನ್ನು ದೂರದಲ್ಲಿಡುವ ವ್ಯವಸ್ಥೆ ಮಾಡುವುದು.

5. ಗಾಯಗೊಂಡವರನ್ನು ಸಂರಕ್ಷಿಸಿ ಸ್ಥಳಾಂತರಿಸುವುದು.

6. ಸಂರಕ್ಷಿಸಿದವರಿಗೆ ವಸತಿ.

7. ಮಾಹಿತಿಗಳ ನಿರ್ವಹಣೆ.

8. ಅಪಾಯಕಾರಿ ಪಶುಗಳ ವಧೆ ಮಾಡುವುದಕ್ಕೆ ಅನುಮತಿ.

9. ನೀರು ಸರಬರಾಜು ನಿರ್ವಹಣೆ.

10. ಸ್ಥಳೀಯ ಅಧಿಕಾರಿಗಳು ಮುಂಜಾಗೃತ ಕ್ರಮಕೈಗೊಳ್ಳಲು ಅಧಿಕಾರ.

11. ಪ್ರಧಾನ ರೇವುಗಳ ಮತ್ತು ಪರಿಸರ ಸಂರಕ್ಷಣೆ.

12. ಕಾರ್ಖಾನೆಗಳು ಹಾಗೂ ಗಣಿಗಳ ಸಂರಕ್ಷಣೆ.

13. ದಾಳಿಗಳಿಗೆ ಮುಂಜಾಗೃತ ಕ್ರಮಗಳು.

14. ಅಗ್ನಿ ದುರಂತದ ಸ್ಥಳಗಳ ಪರಿಶೋಧನೆ.

15. ಸ್ಥಳಗಳಲ್ಲಿ ಸುರಕ್ಷತೆ ಕ್ರಮಗಳು.

16. ಖಾಯಿಲೆಗಳು ಹರಡುವುದನ್ನು ನಿಯಂತ್ರಿಸುವುದು.

17. ವಿಮಾನ ದಾಳಿ ಆಶ್ರಯಗಳು.

18. ಪೌರರಕ್ಷಣೆ ಪೂರ್ವಬಾವಿ ಅಭ್ಯಾಸಗಳು. ​ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top