​​​​​​ಅಧ್ಯಕ್ಷರು​

chairman.jpg

ಡಾ. ಕೆ. ಕಸ್ತೂರಿರಂಗನ್

ಎಂ.ಎಸ್ಸಿ., ಪಿಎಚ್.ಡಿ., ಎಫ್.ಎ.ಎಸ್ಸಿ., ಎಫ್.ಎನ್.ಎ

ಮಾಜಿ ಸದಸ್ಯರು (ವಿಜ್ಞಾನ), ಯೋಜನಾ ಆಯೋಗ

ಭಾರತ ಸರ್ಕಾರ

 

ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್‍ರವರು ಹಾನರ್ಸ್ನೊಂದಿಗೆ ತಮ್ಮ ವಿಜ್ಞಾನ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬಾಂಬೆ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಪಡೆದಿದ್ದು, 1971ರಲ್ಲಿ ಅಹಮದಾಬಾದ್‍ನ ಫಿಸಿಕಲ್ ರಿಸರ್ಚ್ ಪ್ರಯೋಗಾಲಯದಲ್ಲಿ ಕೆಲಸಮಾಡುತ್ತಿದ್ದಾಗ, ಎಕ್ಸ್ಪೆರಿಮೆಂಟಲ್ ಹೈ ಎನರ್ಜಿ ಆಸ್ಟ್ರೋನಮಿಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಮಾರ್ಚ್ 2012 ರಿಂದ) ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಹಮದಾಬಾದ್‍ನ ಫಿಸಿಕಲ್ ರಿಸರ್ಚ್ ಪ್ರಯೋಗಾಲಯ ಮತ್ತು ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ಸಂಶೋಧನಾ ಕೇಂದ್ರದಲ್ಲಿ ಭೌತಶಾಸ್ತ್ರದ ಗೌರವ ಪ್ರಾಧ್ಯಾಪಕರಾಗಿ ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಮತ್ತು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಜೀವಮಾನದ ಗೌರವಾನ್ವಿತ ಪ್ರಾಧ್ಯಾಪಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ (2013).

 

ಈ ಮೊದಲು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನಲ್ಲಿ ನಿರ್ದೇಶಕರಾಗಿ (2004-2009) ಮತ್ತು ಭಾರತೀಯ ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿದ್ದರು (2003-2009). ಇವರು 2009 ರಿಂದ 2013 ರವರೆಗೆ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯ (ವಿಜ್ಞಾನ) ರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. 2003ರವರೆವಿಗೂ 9ವರ್ಷಗಳಿಗೂ ಹೆಚ್ಚು ಕಾಲ ಡಾ. ಕಸ್ತೂರಿರಂಗನ್‍ರವರು ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್‍ನ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ, ಭಾರತದ ಪ್ರಮುಖ ಪ್ರತಿಷ್ಠಿತ ಉಪಗ್ರಹ ಉಡಾವಣಾ ವಾಹನಗಳಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್, ವಿಶ್ವದ ಅತ್ಯುನ್ನತ ನಾಗರಿಕ ದೂರಸ್ಥ ಸಂವೇದನಾ ಉಪಗ್ರಹಗಳು,  ಐಆರ್ಎಸ್-1 ಸಿ ಮತ್ತು 1ಡಿ, ಹೊಸ ತಲೆಮಾರಿನ ಇನ್ಸಾಟ್ ಸಂವಹನ ಉಪಗ್ರಹಗಳು ಮತ್ತು ಸಾಗರ ವೀಕ್ಷಣೆ ಉಪಗ್ರಹಗಳು, ಐಆರ್ಎಸ್-ಪಿ3/ಪಿ4 ಮುಂತಾದವುಗಳನ್ನು ಯಶಸ್ವಿಯಾಗಿ ಪ್ರಾರಂಭಿಸುವ ಮುಖೇನ ಹತ್ತು ಹಲವು ಪ್ರಮುಖ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ಆಸ್ಟ್ರೋಸಾಟ್ ಉಪಗ್ರಹ ಯೋಜನೆಗೆ ಅಡಿಪಾಯ ಹಾಕುವುದರೊಂದಿಗೆ, ಚಂದ್ರಯಾನ-1ರ ಪರಿಕಲ್ಪಕರಾಗಿದ್ದಾರೆ - ಈ ಚಂದ್ರಯಾನವು ಸರ್ಕಾರದ ಅನುಮೋದನೆಗೆ ಒಳಪಡುವ ಎಲ್ಲಾ ಹಂತಗಳಲ್ಲಿ ತೊಡಗಿಸಿಕೊಂಡು ಈ ಕಾಯಕಲ್ಪವನ್ನು ಮುನ್ನಡೆಸಿದ್ದಾರೆ. ಖಗೋಳವಿಜ್ಞಾನಿಯಾಗಿ, ಉನ್ನತ ಕ್ಷ-ಕಿರಣಗಳ ಶಕ್ತಿ ಮತ್ತು ಗಾಮಾ ಕಿರಣ ಖಗೋಳ ವಿಜ್ಞಾನ ಹಾಗೂ ದೃಗ್ವಿಜ್ಞಾನದ ಖಗೋಳಶಾಸ್ತ್ರದ ಕುರಿತಾದ ಸಂಶೋಧನೆಗಳು ಇವರ ಆಸಕ್ತಿಯ ಕೇಂದ್ರಬಿಂದುಗಳಾಗಿವೆ. ಕಾಸ್ಮಿಕ್ ಕ್ಷ-ಕಿರಣಗಳು ಮತ್ತು ಗಾಮಾ ಕಿರಣಗಳ ಮೂಲಗಳು ಮತ್ತು ಕಡಿಮೆ ವಾತಾವರಣದಲ್ಲಿ ಕಾಸ್ಮಿಕ್ ಕ್ಷ-ಕಿರಣಗಳ ಪರಿಣಾಮಗಳು ಮುಂತಾದ ಅಧ್ಯಯನಗಳಿಗೆ ಇವರು ವ್ಯಾಪಕ ಮತ್ತು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.

 

ಡಾ. ಕಸ್ತೂರಿರಂಗನ್‍ರವರು ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೋನಾಟಿಕ್ಸ್ ಸದಸ್ಯರಾಗಿದ್ದು, ಈ ಅಕಾಡೆಮಿಯ ಉಪಾಧ್ಯಕ್ಷರೂ ಸಹಾ ಆಗಿದ್ದಾರೆ. ಇವರು ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯೂನಿಯನ್‍ನ ಸದಸ್ಯರು ಮತ್ತು ಮೂರನೇ ವಿಶ್ವ ವಿಜ್ಞಾನಗಳ ಅಕಾಡೆಮಿಯ ಫೆಲೋ ಆಗಿದ್ದಾರೆ. ಇವರು ಇಂಡಿಯನ್ ಆಕಾಡೆಮಿ ಆಫ್ ಸೈನ್ಸಸ್ನ ಫೆಲೋ ಆಗಿದ್ದು, ಈ ಅಕಾಡೆಮಿಯಲ್ಲಿ 2001-2003ರವರೆಗೆ ಅಧ್ಯಕ್ಷರಾಗಿಯೂ ಸಹ ತಮ್ಮ ಕಾರ್ಯಕ್ಷಮತೆ ತೋರಿದ್ದಾರೆ. ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್‍ನ ಫೆಲೋ ಆಗಿದ್ದಾರೆ ಮತ್ತು ಈ ಅಕಾಡೆಮಿಯಲ್ಲಿ 2005-2006ರವರೆವಿಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 2002-2003ರ ಅವಧಿಯಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ ಜನರಲ್ ಅಧ್ಯಕ್ಷರಾಗಿ ಕೆಲಸಮಾಡಿದ್ದಾರೆ. ಇದರೊಂದಿಗೆ, ಇವರು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಫೆಲೋ ಮತ್ತು ಈ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ. ಇವರು ಯುನೈಟೆಡ್ ಕಿಂಗ್ಡಮ್‍ನ ಕಾರ್ಡಿಫ್ ವಿಶ್ವವಿದ್ಯಾಲಯದ ಗೌರವಾನ್ವಿತ ಫೆಲೋ ಮತ್ತು ವ್ಯಾಟಿಕನ್ ನಗರದ ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಶಿಕ್ಷಣತಜ್ಞರಾಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ.

 

ಇವರು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಫೋಟೋಗ್ರಾಮೆಟ್ರಿ​ ಅಂಡ್ ರಿಮೋಟ್ ಸೆನ್ಸಿಂಗ್ (2004) ನ "ಬ್ರಾಕ್ ಮೆಡಲ್" ಅನ್ನು ಒಳಗೊಂಡಂತೆ, ಇಂಟರ್ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಷನ್ (2004) ನ "ಅಲನ್ ಡಿ ಎಮಿಲ್ ಸ್ಮಾರಕ ಪ್ರಶಸ್ತಿ", ಸಿಂಗಾಪೂರಿನ ಏಷಿಯಾ-ಫೆಸಿಫಿಕ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಕೌನ್ಸಿಲ್ (2005) ನ "ಜೀವಮಾನ ಸಾಧನೆಯ ಪ್ರಶಸ್ತಿ", ಫ್ರಾನ್ಸ್ನ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೋನಾಟಿಕ್ಸ್ (2007) ನ "ಥಿಯೋಡಾರ್ ವಾನ್ ಕರ್ಮನ್ ಪ್ರಶಸ್ತಿ" ಇಂಜಿನಿಯರಿಂಗ್‍ನಲ್ಲಿ "ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ" (1983), ಗೋಯಲ್ ಫೌಂಡೇಶನ್ ವತಿಯಿಂದ "ಗೋಯಲ್ ಪ್ರಶಸ್ತಿ" (1997), ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಆರ್ಯಭಟ ಪದಕ (2000), ಜಿಎಮ್ ಮೋದಿ ಸೈನ್ಸ್ ಫೌಂಡೇಶನ್ (2002) ನ "ಜಿಎಮ್ ಮೋದಿ ಪ್ರಶಸ್ತಿ", ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ "ಆರ್ಯಭಟ ಪ್ರಶಸ್ತಿ" (2003), ಇಂಡಿಯನ್ ಸೈನ್ಸ್ ಕಾಂಗ್ರೆಸ್ (2004) ನ "ಆಶುತೋಷ್ ಮುಖರ್ಜಿ ಮೆಮೋರಿಯಲ್ ಪ್ರಶಸ್ತಿ", ರುವಾ ಕಾಲೇಜ್ ಅಲುಮ್ನಿ ಅಸೋಸಿಯೇಷನ್ (2007) ನ "ಜ್ಯೂಯೆಲ್ ಆಫ್ ರೂಯಾ" ಪ್ರಶಸ್ತಿ, ಮಹಾರಾಣ ಆಫ್ ಮೇವಾರ್ ಚಾರಿಟಬಲ್ ಫೌಂಡೇಶನ್ (2008) ನ "ಮಹಾರಾಣ ಉದಯ್ ಸಿಂಗ್ ಪ್ರಶಸ್ತಿ", ರಾಜಯೋಗೀಂದ್ರ ಪ್ರಶಸ್ತಿ, ಮೈಸೂರು ಮಹಾರಾಜ (2008), ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ (2008) ನ "ಇಸ್ರೋ ಜೀವಮಾನ ಸಾಧನೆ ಪ್ರಶಸ್ತಿ", ಇಂಡಿಯನ್ ಸೈನ್ಸ್ ಕಾಂಗ್ರೆಸ್ (2009) ನ ವಿಕ್ರಂ ಸಾರಾಭಾಯ್ ಮೆಮೊರಿಯಲ್ ಗೋಲ್ಡ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಇಪ್ಪತ್ತಕ್ಕೂ ಹೆಚ್ಚಿನ ವಿಶ್ವವಿದ್ಯಾನಿಲಯಗಳಿಂದ ಗೌರವ ಪದವಿಗಳ ವಿಜೇತರಾಗಿದ್ದಾರೆ. ಐಐಟಿ ಪಾಟ್ನಾ (2013) ಇಂದ ವಿಶೇಷ ಶಿಕ್ಷಣ ತಜ್ಞ ಪ್ರಶಸ್ತಿ, ವಿಶ್ವಭಾರತಿ, ಶಾಂತಿನಿಕೇತನ (2013) ದಿಂದ ದೇಸಿಕೊಟ್ಟಾಮ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಫ್ರೆಂಚ್ ರಿಪಬ್ಲಿಕ್ ಅಧ್ಯಕ್ಷರು ಇವರಿಗೆ "ಲೆಜಿಯನ್ ಡಿ'ಹ್ನನ್ಯೂರ್ನ ಅಧಿಕಾರಿ" ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಇದರೊಂದಿಗೆ, ಇವರು ಭಾರತದ ಅತ್ಯುನ್ನತ ಪೌರಪ್ರಶಸ್ತಿಗಳಾದ "ಪದ್ಮಶ್ರೀ", "ಪದ್ಮಭೂಷಣ" ಮತ್ತು "ಪದ್ಮ ವಿಭೂಷಣ" ಗಳು ಭಾರತದ ಅಧ್ಯಕ್ಷರಿಂದ ಗೌರವಕ್ಕೆ ಭಾಜನರಾಗಿದ್ದಾರೆ. ಫೆಬ್ರವರಿ 2014ರಲ್ಲಿ, "ಧರ್ಮವೀರ ಒರೇಷನ್ ಸೈಟೇಷನ್, ಚಿನ್ನದ ಪದಕ ಮತ್ತು ಜಿಕೆಎಲ್‍ಯು ಪ್ರಶಸ್ತಿಗಳ ವಿಜೇತರಾಗಿದ್ದಾರೆ. ನವೆಂಬರ್ 2014 ರಲ್ಲಿ ಕರ್ನಾಟಕ ಸರ್ಕಾರವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಇವರ ಸೇವೆಗಳನ್ನು ಗುರುತಿಸಿ "ಕನ್ನಡ ರಾಜ್ಯೋತ್ಸವ" ಪ್ರಶಸ್ತಿಯನ್ನು ಪ್ರದಾನ ಮಾಡಿದೆ.​