ಖಜಾನೆ ಇಲಾಖೆ - ಪರಿಚಯ
01.01.1954 ರ ಪೂರ್ವದಲ್ಲಿ ಹಳೆಯ ಮೈಸೂರು ಪ್ರಾಂತದಲ್ಲಿ ಮತ್ತು ಇನ್ನಿತರ ಜಿಲ್ಲೆಗಳಲ್ಲಿ ಖಜಾನೆಗಳು ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು ಆಯಾ ಸ್ಥಳೀಯ ಖಜಾನೆಗಳ ಆಡಳಿತಾಧಿಕಾರಿಗಳಾಗಿದ್ದು, ದಿನಾಂಕ 01.01.1954 ರ ನಂತರ ಜಿಲ್ಲಾ ಮತ್ತು ಉಪ ಖಜಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿವರ್ಗದವರನ್ನು ಬೇರ್ಪಡಿಸಿ, ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಖಜಾನೆ ಸಿಬ್ಬಂದಿಗಳನ್ನೊಳಗೊಂಡ “ಖಜಾನೆ ಕೇಡರ್” ನ್ನು ಸೃಜಿಸಿ, ಖಜಾನೆ ಸಿಬ್ಬಂದಿಗಳಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ಜಾರಿಗೊಳಿಸಲಾಯಿತು. ನಂತರದ ದಿನಗಳಲ್ಲಿ ದಿನಾಂಕ: 01.06.1961 ರಲ್ಲಿ ಕರ್ನಾಟಕ ಖಜಾನೆ ಕೇಡರ್ ಆಸ್ತಿತ್ವಕ್ಕೆ ಬಂದಿದ್ದು, ನಂತರ ಸರ್ಕಾರದ ಆದೇಶ ಸಂ: ಎಫ್ಡಿ 128 ಆರ್.ಟಿ.ಇ / 61 /ದಿನಾಂಕ: 04.09.1964 ರನ್ವಯ ದಿನಾಂಕ: 01.10.1964 ರಿಂದ ಜಾರಿಗೆ ಬರುವಂತೆ ಪ್ರತ್ಯೇಕ ಖಜಾನೆ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು. ಅಲ್ಲಿಂದ ಖಜಾನೆ ಇಲಾಖೆಯು ಹಣಕಾಸು ಇಲಾಖೆಯ ಅಡಿಯಲ್ಲಿ ಸ್ವತಂತ್ರ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ, ಖಜಾನೆ ಇಲಾಖೆಯು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧೀನದ ಯೋಜನೇತರ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆರ್ಥಿಕ ಇಲಾಖೆಯು ರಾಜ್ಯದ ಹಣಕಾಸಿನ ನಿರ್ವಹಣೆಯ ಕಾರ್ಯಭಾರ ಹೊಂದಿದ್ದು, ಈ ಕಾರ್ಯದಲ್ಲಿ ಖಜಾನೆ ಇಲಾಖೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದೆ. ರಾಜ್ಯದ ಒಟ್ಟು ರಾಜಸ್ವ ಜಮೆಗಳು, ಸ್ವೀಕೃತಿಗಳು ಮತ್ತು ಪಾವತಿಗಳನ್ನು ನಿಯಮಾನುಸಾರವಾಗಿ ನಿರ್ವಹಿಸುವ ಗುರುತರ ಹೊಣೆಗಾರಿಕೆಯನ್ನು ಖಜಾನೆ ಇಲಾಖೆ ಹೊಂದಿದೆ. ರಾಜ್ಯದಲ್ಲಿ ಒಟ್ಟೊ 31 ಜಿಲ್ಲಾ ಮತ್ತು 185 ತಾಲ್ಲೂಕು ಖಜಾನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇವು ಸರ್ಕಾರದ ಹಣಕಾಸು ವ್ಯವಸ್ಥೆಯಲ್ಲಿ ಸಾರ್ವಜನಿಕ ಲೆಕ್ಕಗಳು ಪ್ರಾರಂಭವಾಗುವ ಪ್ರಾಥಮಿಕ ಘಟಕಗಳಾಗಿದ್ದು, ಸರ್ಕಾರದ ಹಣಕಾಸು ವಹಿವಾಟಿನ ಜಮಾ ಹಾಗೂ ವೆಚ್ಚವನ್ನು ನಿರ್ವಹಿಸಿ ಅವುಗಳ ಲೆಕ್ಕವನ್ನು ಮಹಾಲೇಖಪಾಲರ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿವೆ. ನಿರ್ದೇಶಕರು, ಖಜಾನೆ ಇಲಾಖೆಯ ಮುಖ್ಯಸ್ಥರಾದ್ದು, ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಇವರು ಖಜಾನೆ ಇಲಾಖೆಯ ಮುಖ್ಯ ನಿಯಂತ್ರಣಾಧಿಕಾರಿಗಳಾಗಿರುತ್ತಾರೆ. ಜನವರಿ 1, 2014 ರಿಂದ ಖಜಾನೆ ಇಲಾಖೆಗೆ ಆಯುಕ್ತರ ಹುದ್ದೆಯನ್ನು ಸೃಜಿಸಲಾಗಿದ್ದು, ಸದರಿ ಹುದ್ದೆಯಲ್ಲಿ ಆಯುಕ್ತರು ಕಾರ್ಯನಿರ್ವಹಿಸುತ್ತಿರುತ್ತಾರೆ.
read more